ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ

ಬೆಂಗಳೂರು: ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗುತ್ತಿಗೆದಾರರ ನಡುವಿನ ಜಗಳವೇ ಬಿಎಸ್‌ವೈ ಪಿಎ ಮನೆ ಮೇಲೆ ಐಟಿ ದಾಳಿಗೆ ಮೂಲ ಕಾರಣ ಎಂಬ ವಿಚಾರ ಈಗ ತಿಳಿದು ಬಂದಿದೆ.

ಆರೋಪ ಏನು?
ನೀರಾವರಿ ಟೆಂಡರ್‌ಗಳನ್ನು ಬೇಕಾದವರಿಗೆ ಮಾಡಿಕೊಡುತ್ತಿದ್ದ ಉಮೇಶ್‌ ಬಳಿಕ ಕಮಿಷನ್ ರೂಪದಲ್ಲಿ ಕೋಟಿ ಕೋಟಿ ರೂ. ದುಡ್ಡು ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಉಮೇಶ್‌ ಮೇಲೆ ಶಿವಮೊಗ್ಗ, ಬೆಂಗಳೂರಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪವಿದೆ.

`ಎ’ ಗ್ರೇಡ್ ಟೆಂಡರ್‌ಗಳನ್ನು ಆಂಧ್ರ ಮೂಲದವರಿಗೆ ಸಿಗುವಂತೆ ಕೆಲಸ ಮಾಡುತ್ತಿದ್ದ ಉಮೇಶ್‌ ಕರ್ನಾಟಕದ ಗುತ್ತಿಗೆದಾರರಿಗೆ ಗುತ್ತಿಗೆ ತಪ್ಪಿಸುತ್ತಿದ್ದ. ಈ ವಿಚಾರದ ಬಗ್ಗೆ ಎರಡೂ ರಾಜ್ಯದ ಗುತ್ತಿಗೆದಾರ ಮಧ್ಯೆ ಗಲಾಟೆ ನಡೆಯುತ್ತಿತ್ತು. ತಿಕ್ಕಾಟ ಜೋರಾದ ಬಳಿಕ ರಾಜ್ಯದ 8 ಮಂದಿ ಗುತ್ತಿಗೆದಾರರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಐಟಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಸಮಯ ನೋಡಿ ಈಗ ದಾಳಿ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಕಾವೇರಿ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲನಿಗಮದ ಟೆಂಡರ್‌ನಲ್ಲಿ ಗೋಲ್ಮಾಲ್‌ ಮಾಡಿದ್ದು, ಬಿಡುಗಡೆಯಾದ ಹಣಕ್ಕೂ, ಕಾಮಗಾರಿಯ ಹಣಕ್ಕೂ ಭಾರೀ ವ್ಯತ್ಯಾಸ ಕಂಡು ಬಂದಿದೆ. ಗುತ್ತಿಗೆದಾರರಿಗೆ ಕೊಟ್ಟಿರುವ ಹಣದ ಅಂಕಿ-ಅಂಶದಲ್ಲೂ ಏರುಪೇರು ಕಾಣಿಸಿದ್ದು, ಎರಡೂವರೆ ವರ್ಷದಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿಜಯೇಂದ್ರ ಮಾಡಿದ ಭ್ರಷ್ಟಾಚಾರಕ್ಕೆ ಈ ದಾಳಿ ಸಾಕ್ಷಿ: ಎಚ್. ವಿಶ್ವನಾಥ್

ಆರೋಪ ನಿಜ?
ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಪರಿಷತ್ ಸದಸ್ಯ ವಿಶ್ವನಾಥ್ ಅವರ ಆರೋಪ ನಿಜವಾಯ್ತಾ ಎಂಬ ಪ್ರಶ್ನೆ ಎದ್ದಿದೆ.

ಹೌದು. ಈ ಹಿಂದೆ ವಿಶ್ವನಾಥ್ ಅವರು ಬಿಎಸ್‍ವೈ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ನಾನು ಯಡಿಯೂರಪ್ಪನವರನ್ನು ಟಾರ್ಗೆಟ್‌ ಮಾಡುತ್ತಿಲ್ಲ. ಇದು ಟಾರ್ಗೆಟ್ ಕರೆಪ್ಶನ್‌. ಬಿಎಸ್‍ವೈ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಬೆಳಗಾವಿ ಮನೆ ಗೋಡೆ ಕುಸಿದು 7 ಮಂದಿ ಸಾವು- 2 ಲಕ್ಷ ರೂ. ಪರಿಹಾರ ಘೋಷಿಸಿದ ಮೋದಿ

ಆರ್ಥಿಕ ಇಲಾಖೆ ಮತ್ತು ನೀರಾವರಿ ನಿಗಮಗಳ ಒಪ್ಪಿಗೆ ಪಡೆಯದೇ ತರಾತುರಿಯಲ್ಲಿ ಟೆಂಡರ್‌ ಹಂಚಿಕೆ ಮಾಡಲಾಗಿದೆ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು. ನಾಯಕತ್ವ ಬದಲಾವಣೆಗೆ ಕಾರಣ ಕೊಟ್ಟಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದರು.

ನೀರಾವರಿ ಇಲಾಖೆಯಲ್ಲಿ ಡೀಲ್‌?
ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದಾಗ ಡೀಲ್ ಆರೋಪ ಕೇಳಿ ಬಂದಿತ್ತು. ಉಮೇಶನ ಡೀಲ್‍ನಿಂದ ರೋಸಿ ಹೋಗಿದ್ದ ರಮೇಶ್ ಜಾರಕಿಹೊಳಿ ಬಿಎಸ್‍ವೈ, ವಿಜಯೇಂದ್ರ ಬಳಿಯೂ ಚರ್ಚಿಸಿದ್ದರು ಎಂದು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *