ಬಿಬಿಎಂಪಿ ಸಭಾಂಗಣದ ಒಳಗೆಯೇ ಕಿತ್ತಾಡಿಕೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು! ವಿಡಿಯೋ ನೋಡಿ

ಬೆಂಗಳೂರು: ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿದ್ದು, ಬಿಬಿಎಂಪಿ ಪದ್ಮನಾಭ ರೆಡ್ಡಿ ಕಚೇರಿ ಮುಂದೆ ಹಾಗೂ ಸಭಾಂಗಣದ ಒಳಗೆ ಸದಸ್ಯರು ಕಿತ್ತಾಡಿದ್ದರು.

ಕಚೇರಿ ಒಳಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ರೌಡಿಗಳಂತೆ ವರ್ತಿಸಿದ್ದರು. ಸತೀಶ್ ರೆಡ್ಡಿ ಹಾಗೂ ವಿಶ್ವನಾಥ್ ನಡುವೆ ತಳ್ಳಾಟ ಜೋರಾಗಿ ನಡೆದಿದ್ದು, ಬಿಜೆಪಿ ಸದಸ್ಯರನ್ನು ಹೈಜಾಕ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಕೇಳಿಬಂದಿದೆ. ಈ ವೇಳೆ ಭೈರತಿ ಸುರೇಶ್ ಹಾಗೂ ಸತೀಶ್ ರೆಡ್ಡಿ ನಡುವೆ ನೂಕಾಟ ಏರ್ಪಟ್ಟಿತ್ತು.

ಬೈರಸಂದ್ರ ವಾರ್ಡ್ ಕಾರ್ಪೋರೇಟರ್ ನಾಗರಾಜನನ್ನು ಬಲವಂತವಾಗಿ ಬಿಜೆಪಿ ಸದಸ್ಯರು ಎಳೆದುಕೊಂಡು ಹೋಗಿದ್ದರು. ಈ ವೇಳೆ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ನಡುವೆ ಭಾರೀ ಗದ್ದಲ ಏರ್ಪಟ್ಟಿತ್ತು. ಅಲ್ಲದೇ ಸತೀಶ್ ರೆಡ್ಡಿ ಬೆಂಬಲಿಗನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿಕೊಂಡಿದ್ದಾರೆ ಅಂತ ತಮ್ಮ ಬೆಂಬಲಿಗನನ್ನು ಹೊರ ತರಲು ಮುಂದಾದ ಸತೀಶ್ ರೆಡ್ಡಿ ವಿರುದ್ಧ ಕಾಂಗ್ರೆಸ್ ಸದಸ್ಯರು ಅಡ್ಡಹಾಕಿ ಗೊಂದಲ ಸೃಷ್ಟಿಸಿದ್ದರು.

ಈ ಮೊದಲು ಬಿಜೆಪಿ ಜೊತೆ ಇದ್ದ ಪಕ್ಷೇತರ ಶಾಸಕ ಆನಂದ್, ಸಭಾಂಗಣದಲ್ಲಾದ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್ ಪಾಲಾಗಿದ್ದರು. ಅಲ್ಲದೇ ತಮ್ಮ ಬೆಂಬಲಿಗನ್ನು ಪಡೆಯಲು ಮುಂದಾದ ಸತೀಶ್ ರೆಡ್ಡಿಯನ್ನು ಶಾಸಕ ಮುನಿರತ್ನ ಹಾಗೂ ಭೈರತಿ ಸುರೇಶ್ ತಡೆದಿದ್ದರು. ಶಾಸಕರು ಹಾಗೂ ಸದಸ್ಯರ ಕಿತ್ತಾಟವನ್ನು ಕಂಡ ಕೇಂದ್ರ ಸಚಿವ ಸದಾನಂದಗೌಡ ಮೂಕ ಪ್ರೇಕ್ಷಕರಂತೆ ನಿಂತಿದ್ದರು.

ಇವರ ಗಲಾಟೆಯ ನಡುವೆ ಸಭೆಯ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಕಲಾಗಿತ್ತು. ಆದರೆ ರಾಷ್ಟ್ರಗೀತೆಯ ನಡುವೆಯೇ ಸದಸ್ಯರು ತಮ್ಮ ಕಿತ್ತಾಟ ಮುಂದುವರಿದಿತ್ತು. ಬಿಬಿಎಂಪಿಯ ಎಲ್ಲಾ ವಿದ್ಯಮಾನಗಳನ್ನು ಸಚಿವ ಶಾಸಕ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು.

ಸದಸ್ಯರ ಕಿತ್ತಾಟದ ನಡುವೆಯೆ ಚುನಾವಣಾ ಅಧಿಕಾರಿ ಚುನಾವಣೆಯನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಸದಸ್ಯರಗೂ ನಿಗಧಿತ ಸ್ಥಳಗಳಲ್ಲಿ ಕುಳಿತುಕೊಳ್ಳಲು ಸೂಚನೆ ನೀಡಿದ್ದರು. ಸದಸ್ಯರ ಹಾಜರಾತಿಯನ್ನು ಪಡೆಯಲು ಅಧಿಕಾರಿಗಳು ಸೂಚಿಸಿದ್ದ ಮೇರೆಗೆ, ಸದಸ್ಯರ ಹಾಜರಾತಿಯನ್ನು ಸಿಬ್ಬಂದಿಗಳು ಪಡೆದುಕೊಳ್ಳುತ್ತಿದ್ದರು. ಸದ್ಯ ಬಿಬಿಎಂಪಿ ಚುನಾವಣೆ ಮುಗಿದಿದ್ದು, ಮೇಯರ್ ಆಗಿ ಗಂಗಾಂಭಿಕೆ ಹಾಗೂ ಉಪ ಮೇಯರ್ ಆಗಿ ರಮೀಳಾ ಉಮಾಶಂಕರ್ ಆಯ್ಕೆಯಾಗಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *