ಮಡಿಕೇರಿ: ಸುಂಟಿಕೊಪ್ಪದ ಬಾಸ್ಕೆಟ್ ಬಾಲ್ ಆಟಗಾರ್ತಿಯೊಬ್ಬರು ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಚಿತ್ತವನ್ನು ಮತ್ತೊಮ್ಮೆ ಕೊಡಗಿನತ್ತ ಹರಿಯುವಂತೆ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗದ್ದೆಹಳ್ಳದ ಕೃಷಿಕರಾಗಿರುವ ಉದಯಕುಮಾರ್ ಮತ್ತು ಗಿರಿಜ ದಂಪತಿಯ ಪುತ್ರಿ, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ನವನೀತಾ ಅವರು ಫಿಬಾ ಏಷ್ಯಾ ಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದವರಾಗಿದ್ದಾರೆ. ಸೆಪ್ಟಂಬರ್ 27 ರಿಂದ ಅಕ್ಟೋಬರ್ 30 ರವರೆಗೆ ಜೋರ್ಡಾನ್ ನ ಅಮ್ಮಾನ್ ನಲ್ಲಿ ಈ ಟೂರ್ನಿ ನಡೆಯಲಿದೆ. ಸೆಪ್ಟಂಬರ್ 27 ರಂದು ನಡೆಯುವ ಮೊದಲ ಹಣಾಹಣಿಯಲ್ಲಿ ಭಾರತ ತಂಡವು ಜಪಾನ್ ಎದುರು ಹಾಗೂ 29 ರಂದು ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ. ಇದನ್ನೂ ಓದಿ: ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

ರಾಷ್ಟ್ರೀಯ ಟೂರ್ನಿಗಳಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಿರುವ ನವನೀತಾ ಅವರು, ಪ್ರಾಥಮಿಕ ಶಿಕ್ಷಣವನ್ನು ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದಾರೆ. ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರಿಂದ ಬೆಂಗಳೂರಿನ ದೇವನಹಳ್ಳಿ ವಿದ್ಯಾನಗರದ ಡಿವೈಇಎಸ್ ಕ್ರೀಡಾ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮೈಸೂರು ಮರಿಮಲ್ಲಪ್ಪ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ಮೈಸೂರು ಕ್ರೀಡಾ ಹಾಸ್ಟೆಲ್ ಗೆ ಸೇರಿ ಬೇರೆ ರಾಜ್ಯಗಳಲ್ಲಿ ತರಬೇತಿ ಪಡೆದರು. ಮೈಸೂರು ಟೆರಿಷನ್ ಕಾಲೇಜಿನಲ್ಲಿ ಪದವಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಬಾಸ್ಕೆಟ್ ಬಾಲ್ ನಲ್ಲಿನ ಇವರ ಕ್ರೀಡಾ ಸಾಧನೆಗಾಗಿ 2015ರಲ್ಲಿ ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಅರಸಿಕೊಂಡು ಬಂದಿದೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್ಸಿಬಿ ಬೌಲರ್ಸ್

ಗೆದ್ದು ಬನ್ನಿ: ನವನೀತಾ ಅವರು ಆಯ್ಕೆಗೊಂಡಿರುವ ಭಾರತ ಮಹಿಳಾ ಬಾಸ್ಕೆಟ್ ಬಾಲ್ ತಂಡವು ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಲಿ. ವಿಜಯಮಾಲೆ ಧರಿಸಿ ಬರಲೆಂದು ಕೊಡಗಿನ ಜನರು ಹಾಗೂ ಸುಂಟಿಕೋಪ್ಪ ಗ್ರಾಮಸ್ಥರು ಹಾರೈಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಇದೇ ಸುಂಟಿಕೊಪ್ಪದ ಕಂಬಿಬಾಣೆಯ ಅಂಕಿತಾ ಸುರೇಶ್ ಅವರು ಕಾರ್ಯ ನಿರ್ವಹಿಸಿದ್ದರು. ಈ ಮೂಲಕ ದೇಶದ ಗಮನ ಸೆಳೆದಿದ್ದರು. ಇದೀಗ ನವನೀತಾ ಅವರು ಸಹ ಬಾಸ್ಕೆಟ್ ಬಾಲ್ ನಲ್ಲಿ ಮತ್ತೊಂದು ಸಾಧನೆಗೆ ಮುಂದಾಗಿದ್ದಾರೆ.

Leave a Reply