ಸ್ನೇಹಿತರ ಜೊತೆ ಹೋಗಲು ಕ್ಲಾಸ್ ಬಂಕ್ ಮಾಡಿ ಕಿಡ್ನಾಪ್ ನಾಟಕವಾಡಿದ್ಳು

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಕಾಲೇಜ್ ಬಂಕ್ ಮಾಡಿ ಸ್ನೇಹಿತರ ಜೊತೆ ಸುತ್ತಾಡಲು ಹೋಗಿದ್ದಳು. ಆದರೆ ಈ ವಿಚಾರ ಅಪ್ಪನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ಹೆದರಿ ಕಿಡ್ನಾಪ್ ನಾಟಕವಾಡಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ.

ವಿದ್ಯಾರ್ಥಿನಿ ಆರ್ಯ(18) ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷ ಕರೆಸ್ಪಾಂಡೆನ್ಸ್ ಪದವಿ ಓದುತ್ತಿದ್ದಳು. ಭಾನುವಾರ ಪೋಷಕರ ಬಳಿ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಮನೆ ಬಿಟ್ಟಿದ್ದ ಆರ್ಯ ಕ್ಲಾಸ್‍ಗೆ ಬಂಕ್ ಹಾಕಿ, ಸ್ನೇಹಿತರ ಜೊತೆಗೆ ದೆಹಲಿಯ ಪುರಾನ ಖಿಲಾಗೆ ಹೋಗಿದ್ದಳು. ಈ ವೇಳೆ ಆಕೆಯ ತಂದೆ ಕರೆ ಮಾಡಿದಾಗ ಕಾಲೇಜಿನ ಕಟ್ಟಡದಿಂದ ಹೊರಗಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಆಗ ತಂದೆ ಅನುಮಾನದಿಂದ ವಿಡಿಯೋ ಕಾಲ್ ಮಾಡಿ ಕಾಲೇಜಿನ ಕಟ್ಟಡ ತೋರಿಸು ಎಂದು ಹೇಳಿದಾಗ ಹೆದರಿಕೊಂಡು ಕರೆ ಕಟ್ ಮಾಡಿದ್ದಳು. ಆ ಬಳಿಕ ಎಷ್ಟೇ ಬಾರಿ ತಂದೆ ಕರೆ ಮಾಡಿದರೂ ಆಕೆ ಸ್ವೀಕರಿಸಲಿಲ್ಲ.

ಸಂಜೆ ಮನೆಗೆ ಹೋಗಾದ ಕಾಲೇಜಿಗೆ ಬಂಕ್ ಹಾಕಿದ ವಿಚಾರ ಎಲ್ಲಿ ತಂದೆಗೆ ತಿಳಿಯುತ್ತೋ ಎಂಬ ಭಯಕ್ಕೆ ಸ್ನೇಹಿತರ ಮನೆಗೆ ಹೋಗಿ ಸುಳ್ಳು ಕಿಡ್ನಾಪ್ ಪ್ಲಾನ್ ಮಾಡಿದಳು. ತನ್ನ ಕೈ ಹಾಗೂ ಕಾಲಿಗೆ ಹಗ್ಗದಿಂದ ಬಿಗಿಸಿಕೊಂಡು, ನನ್ನನ್ನು ಬಿಟ್ಟುಬಿಡಿ ಎಂದು ಕೂಗಾಡಿದ ವಿಡಿಯೋವನ್ನು ತಂದೆಗೆ ವಾಟ್ಸಾಪ್ ಮೂಲಕ ಕಳುಹಿಸಿದಳು. ವಿಡಿಯೋ ನೋಡಿ ನಂಬಿ, ಗಾಬರಿಗೊಂಡ ತಂದೆ ತಮ್ಮ ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಮರುದಿನ ಬೆಳಗ್ಗೆ ಬಲ್ಲಿಮರನ್ ಬಸ್ ನಿಲ್ದಾಣದ ಬಳಿ ಬಂದು ಅಲ್ಲಿಂದ ಪ್ರಯಾಣಿಕರ ಸಹಾಯ ಪಡೆದು ಆರ್ಯ ತಂದೆಗೆ ಕರೆ ಮಾಡಿಸಿದ್ದಾಳೆ. ಬಳಿಕ ತಂದೆ ಸ್ಥಳಕ್ಕೆ ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋದರು. ನಿನ್ನನ್ನು ಕಿಡ್ನಾಪ್ ಮಾಡಿದವರು ಯಾರು? ಹೇಗೆ ತಪ್ಪಿಸಿಕೊಂಡು ಬಂದೆ ಎಂದು ಪೋಷಕರು ಪ್ರಶ್ನಿಸಿದಾಗ, 4 ಮಂದಿ ನನ್ನನ್ನು ಕಿಡ್ನಾಪ್ ಮಾಡಿ ಕಾಡಿನಲ್ಲಿ ಇರಿಸಿದ್ದರು. ರಾತ್ರಿ ಅವರು ಮಲಗಿದ್ದ ವೇಲೆ ನಾನು ಉಪಾಯ ಮಾಡಿ ತಪ್ಪಿಸಿಕೊಂಡು ಬಂದೆ ಎಂದು ಕಥೆ ಕಟ್ಟಿದಳು.

ಆದರೆ ಪೊಲೀಸರು ಕಿಡ್ನಾಪ್ ಬಗ್ಗೆ ವಿಚಾರಣೆ ನಡೆಸಿದಾಗ ಪೋಷಕರಿಗೆ ಹೇಳಿದ್ದ ಸುಳ್ಳು ಕಥೆಯನ್ನೇ ಮೊದಲು ಆರ್ಯ ಹೇಳಿದ್ದಳು. ಆಗ ಪೊಲೀಸರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಭಯಗೊಂಡು ತನ್ನ ನಾಟಕದ ಬಗ್ಗೆ ಬಾಯಿಬಿಟ್ಟಳು, ಅಪ್ಪನ ಮೇಲಿನ ಭಯಕ್ಕೆ ಹೀಗೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

Comments

Leave a Reply

Your email address will not be published. Required fields are marked *