– ಫಾಝಿಲ್‌ನನ್ನೇ ಟಾರ್ಗೆಟ್ ಮಾಡಿದ್ದು ಯಾಕೆ..?
ಮಂಗಳೂರು: ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ (23) ಹತ್ಯೆಯಾಗಿದ್ದ ಯುವಕನಾಗಿದ್ದು, ಈತ ಬುಲೆಟ್ ಟ್ಯಾಂಕರ್ ನಲ್ಲಿ ಪಾರ್ಟ್ ಟೈಮ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಏಳೆಂಟು ತಂಡಗಳಲ್ಲಿ ಪ್ರಕರಣ ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗಿತ್ತು. ಮೂರು ದಿನಕ್ಕೆ 15 ಸಾವಿರ ಬಾಡಿಗೆ ಕೊಡ್ತೇವೆ ಎಂದು ಹಂತಕರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಕ್ರಾಸ್ತಾ ಎಂಬ ಕಾರಿನ ಮಾಲೀಕ ಹಣದ ಆಸೆಗೆ ಕಾರು ಕೊಟ್ಟಿದ್ದ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

ಮಾಲೀಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಗಾಡಿ ಪಡೆದವರು ಯಾರೆಂದು ಗೊತ್ತಾಗುತ್ತೆ. ಒಟ್ಟು 6 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಿದ್ದೇವೆ. ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್ ಶೆಟ್ಟಿ( 29), ಮೋಹನ್(23) ಮತ್ತು ಗಿರೀಶ್(27) ಎಂದು ಗುರುತಿಸಲಾಗಿದೆ. ಜುಲೈ 26 ರಂದು ರಾತ್ರಿ ಬಜ್ಪೆ ನಿವಾಸಿ ಸುಹಾಸ್, ಅಭಿಷೇಕ್‍ಗೆ ಕರೆ ಮಾಡುತ್ತಾನೆ. 27 ರಂದು ಮಧ್ಯಾಹ್ನದ ಒಳಗೆ ಯಾರನ್ನಾದರು ಹೊಡೀಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ. ಅಂತೆಯೇ ಸುಹಾಸ್, ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಪ್ಲಾನ್ ಮಾಡುತ್ತಾರೆ. ಮಹಮ್ಮದ್ ಫಾಝಿಲ್ ಹೊಡಿಬೇಕು ಎಂದು ಸ್ಕೆಚ್ ಹಾಕುತ್ತಾರೆ. 28 ರಂದು ಸುಹಾಸ್ ಮಾರಕಾಸ್ತ್ರದ ಜೊತೆ ಕಾರಿನಲ್ಲಿ ತೆರಳುತ್ತಾನೆ ಎಂದರು.

ಈ ಮಧ್ಯೆ ಆರೋಪಿಗಳು 3-4 ಮಂಕಿ ಕ್ಯಾಪ್ ಖರೀದಿಸುತ್ತಾರೆ. ಮಂಕಿಕ್ಯಾಪ್ ರೆಡಿ ಮಾಡಿ ಸುರತ್ಕಲ್ ಹೊರವಲಯದ ಕ್ಯಾಂಟೀನ್ ನಲ್ಲಿ ಸೇರುತ್ತಾರೆ. ನಂತರ ಕಿನ್ನಿಗೋಳಿ ಬಾರ್ ನಲ್ಲಿ ಊಟ ಮಾಡಿ ಹತ್ಯೆಗೆ ಸಿದ್ಧತೆ ಮಾಡುತ್ತಾರೆ. ಹತ್ಯೆಗೂ ಮುನ್ನ ಸುರತ್ಕಲ್ ಹತ್ಯೆ ಜಾಗದಲ್ಲಿ ಮೂರು ಬಾರಿ ಓಡಾಟ ನಡೆಸುತ್ತಾರೆ. ಬಳಿಕ ರಾತ್ರಿ ಶ್ರೀನಿವಾಸ್, ಮೋಹನ್ ಮತ್ತು ಸುಹಾಸ್ ಮಾರಕಾಸ್ತ್ರ ಹಿಡಿದು ಕಾರಿನಿಂದ ಇಳಿದು ಫಾಝಿಲ್ ಮೇಲೆ ದಾಳಿ ಮಾಡುತ್ತಾರೆ.

ಗಿರಿಧರ್ ಕಾರು ಚಾಲಕನಾಗಿದ್ದು, ದೀಕ್ಷಿತ್ ಕಾರಿನಲ್ಲೇ ಇದ್ದ ಹಾಗೂ ಅಭಿಷೇಕ್ ಕಾರಿನಿಂದ ಇಳಿದು ಸುತ್ತಮುತ್ತ ಅಲರ್ಟ್ ಮಾಡುತ್ತಾನೆ. 6 ಜನ ಆರೋಪಿಗಳೂ ಒಂದೇ ಇಯಾನ್ ಕಾರ್ ನಲ್ಲಿ ಬಂದಿದ್ರು. ಹತ್ಯೆ ಮಾಡಿ ಆರೂ ಜನರು ಇನ್ನಾ ಭಾಗಕ್ಕೆ ತೆರಳಿ ಕಾರು ನಿಲ್ಲಿಸುತ್ತಾರೆ. ಬಳಿಕ ಸ್ನೇಹಿತನ ಮೂಲಕ ಮತ್ತೊಂದು ಕಾರು ತರಿಸಿ ಎಸ್ಕೇಪ್ ಆಗುತ್ತಾರೆ.

ಉಡುಪಿಯ ಉದ್ಯಾವರ ಬಳಿ ಆರು ಆರೋಪಿಗಳನ್ನ ಬೆಳಗ್ಗೆ ಬಂಧಿಸಲಾಗಿದೆ. ಸದ್ಯ ಆರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ. ಪ್ರಕರಣ ನಡೆದ ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ. ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಹೇಳಿದರು.

ಇತ್ತ ಫಾಝಿಲ್, ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ. ಒಟ್ಟಿನಲ್ಲಿ ನಮ್ಮ ತನಿಖೆಯಲ್ಲಿ ಇದು ಫಾಝಿಲ್ ಮೇಲೆ ನಡೆದ ಪ್ಲಾನ್ ಅನ್ನೋದು ಸ್ಪಷ್ಟವಾಗಿದೆ ಎಂದು ಎನ್ ಶಶಿಕುಮಾರ್ ಮಾಹಿತಿ ನೀಡಿದರು.

ಸದ್ಯ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ಆರೋಪಿಗಳ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚುತ್ತೇವೆ. ಅಲ್ಲದೆ ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ರು ಅಂತಾ ತನಿಖೆಯಲ್ಲಿ ತಿಳಿಯಬೇಕು ಎಂದು ಹೇಳಿದರು.

Leave a Reply