ಬೆಂಗಳೂರು: ಆಸ್ತಿ ಬರೆದುಕೊಡಲಿಲ್ಲ ಅಂತಾ ಪಾಪಿ ಮಗನೊಬ್ಬ ತಂದೆಯ ಕಣ್ಣು ಕಿತ್ತು ಹಾಕಿರುವ ಪೈಶಾಚಿಕ ಕೃತ್ಯ ಜೆ.ಪಿ.ನಗರದ ಶಾಕಾಂಬರಿ ಬಡವಾಣೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಈ ಭಯಾನಕ ಘಟನೆ ನಡೆದಿದೆ.
ಚೇತನ್ ಎಂಬಾತ ತನ್ನ ಬೆರಳುಗಳಿಂದಲೇ 65 ವರ್ಷದ ತಂದೆ ಪರಮೇಶ್ ಅವರ ಕಣ್ಣು ಕಿತ್ತು ಹಾಕಿದ್ದಾನೆ. ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ನಿವೃತ್ತ ನೌಕರರಾಗಿರುವ ಪರಮೇಶ್ ಶಾಕಾಂಬರಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಎರಡನೇ ಮಗನಾಗಿರುವ ಚೇತನ್ ಆಸ್ತಿಯಲ್ಲಿ ಪಾಲು ಬೇಕೆಂದು ತಂದೆಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ತನ್ನ ಬೆರಳುಗಳ ಉಗುರಿನ ಸಹಾಯದಿಂದ ಕಣ್ಣು ಗುಡ್ಡೆಯನ್ನು ಕಿತ್ತು ಬಿಸಾಕಿದ್ದಾನೆ. ಮತ್ತೊಂದು ಕಣ್ಣು ಸಂಪೂರ್ಣ ರಕ್ತಮಯವಾಗಿದೆ.

ಘಟನೆ ಬಳಿಕ ಭಯಬೀತನಾದ ಚೇತನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಚೇತನ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಗನ ಹಲ್ಲೆಯಿಂದ ಗಾಯಗೊಂಡಿದ್ದ ಪರಮೇಶ್ ಅವರನ್ನು ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಮೇಶ್ ರನ್ನು ನೋಡಿದ ವೈದ್ಯರು ಎರಡು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ಚೇತನ್ ಓರ್ವ ಡ್ರಗ್ ಅಡಿಕ್ಟ್ ಆಗಿದ್ದು, ಮನೆಯಲ್ಲಿ ಹಣಕ್ಕಾಗಿ ಪೋಷಕರನ್ನು ಪದೇ ಪದೇ ಪೀಡಿಸುತ್ತಿದ್ದನಂತೆ. ಪೋಷಕರು ಹಣ ಕೊಡದೇ ಇದ್ದಾಗ ಆಸ್ತಿಯಲ್ಲಿ ಪಾಲು ಬೇಕೆಂದು ಹಠ ಹಿಡಿದಿದ್ದಾನೆ. ಒಂದು ವೇಳೆ ಆಸ್ತಿಯಲ್ಲಿ ಭಾಗ ನೀಡಿದ್ರೆ ಹಾಳು ಮಾಡ್ತಾನೆ ಅಂತಾ ಪೋಷಕರು ಪಾಲು ನೀಡಿರಲಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply