10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

ಅಹಮದಾಬಾದ್: ಕೆಲಸವಿಲ್ಲವೆಂದು ಜೀವನ ನಿರ್ವಹಣೆಗಾಗಿ ಪಾಪಿ ತಂದೆಯೊಬ್ಬ ತನ್ನ 10 ವರ್ಷದ ಮಗಳನ್ನೇ 50 ಸಾವಿರಕ್ಕೆ ಮಾರಿದ ಅಮಾನವೀಯ ಘಟನೆಯೊಂದು ಅಹಮದಾಬಾದ್ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಗುಜರಾತಿನ ಸಾಮಾಜಿಕ ನ್ಯಾಯ ಇಲಾಖೆ ತನಿಖೆ ನಡೆಸಿದ ವೇಳೆ ತಂದೆಯ ಕೃತ್ಯ ಬಯಲಾಗಿದೆ. ಮದುವೆಯಾದ ವ್ಯಕ್ತಿಯನ್ನು ಗೋವಿಂದ್ ಥ್ಯಾಕೂರ್ ಹಾಗೂ ಏಜೆಂಟಾಗಿ ಕೆಲಸ ಮಾಡಿದ್ದಾತನನ್ನು ಜಗ್ಮಲಗ ಗಮರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ, ಗೋವಿಂದ್, ಏಜೆಂಟ್ ಸೇರಿದಂತೆ ಮತ್ತಿತರ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

ಬನಸ್ಕಂತ ಜಿಲ್ಲೆಯ ನಿವಾಸಿಯಾಗಿರುವ ವ್ಯಕ್ತಿ ತನ್ನ ಮಗಳನ್ನು 37 ವರ್ಷದವನಿಗೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ. ಮದುವೆಯ ಮೂಲಕ ತನ್ನ ಮಗಳನ್ನು 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಸ್ಥಳೀಯ ಏಜೆಂಟ್ ಮೂಲಕ ತನ್ನ ಮಗಳನ್ನು ಮಾರಾಟ ಮಾಡಲು ಒತ್ತಡ ಹೇರಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮಹಿಳಾ ಕೈಂ ಬ್ರ್ಯಾಂಚ್ ನವರು ಬಾಲಕಿಯನ್ನು ಅಸರ್ವಾ ಮನೆಯಿಂದ ಮಂಗಳವಾರ ರಕ್ಷಿಸಿದ್ದಾರೆ. ಸದ್ಯ ಆಕೆಯನ್ನು ಒಧವ್ ನಲ್ಲಿರುವ ಮಹಿಳಾ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ.

ಬಾಲಕಿಯ ತಂದೆ ಬಡವನಾಗಿದ್ದು, ಜೀವನ ನಿರ್ವಹಣೆ ಮಾಡಲು ಹಣಕ್ಕಾಗಿ ಪರದಾಡುತ್ತಿದ್ದನು. ಈ ವೇಳೆ ಗ್ರಾಮದಲ್ಲಿರುವ ಏಜೆಂಟ್ ವೊಬ್ಬ ಹಣದ ಆಮಿಷ ಒಡ್ಡಿದ್ದಾನೆ. ನಿನ್ನ ಮಗಳನ್ನು ನಾನು ಹೇಳಿದ ವ್ಯಕ್ತಿಗೆ ಮದುವೆ ಮಾಡಿಕೊಟ್ಟರೆ 50 ಸಾವಿರ ಸಿಗುತ್ತದೆ ಎಂದು ಹೇಳಿದ್ದಾನೆ ಎಂಬುದಾಗಿ ಬಾಲ್ಯವಿವಾಹ ತಡೆಯ ಅಧಿಕಾರಿ ಮನೀಶ್ ಜೋಶಿ ತಿಳಿಸಿದ್ದಾರೆ.

ಘಟನೆ ಸಂಬಂಧ ಹಡದ್ ಠಾಣೆಯ ಪೊಲೀಸರು ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮದುವೆಯ ವಿಡಿಯೋ ಕೂಡ ಮಾಡಲಾಗಿದ್ದು, ಈ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿಡಿಯೋದಲ್ಲಿ 37 ವರ್ಷದ ಗೋವಿಂದ್ ಥ್ಯಾಕೂರ್ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾನೆ. ಪೊಲೀಸರಿಗೆ ಹಸ್ತಾಂತರವಾದ ವಿಡಿಯೋವನ್ನು ಬಾಲಕಿಯ ತಂದೆಗೆ ತೋರಿಸಿದಾಗ ಆತ ತನ್ನ ಅಪ್ರಾಪ್ತ ಮಗಳನ್ನು ಗುರುತಿಸಿದ್ದಾನೆ. ಅಲ್ಲದೆ ತಾನೇ ಮಗಳನ್ನು ಆಗಸ್ಟ್ ನಲ್ಲಿ ಗೋವಿಂದನಿಗೆ ಮದುವೆ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ಗೋವಿಂದ್ ತನ್ನ ನಿವಾಸ ಅಹಮದಾಬಾದ್ ನಲ್ಲಿರುವ ಅಸರ್ವಾದಲ್ಲಿ ಬಾಲಕಿ ಮೇಲೆ ಕಳೆದ 2 ತಿಂಗಳಿನಿಂದ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಅತ್ಯಾಚಾರ ಆರೋಪದಡಿ ಗೋವಿಂದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಬಾಲಕಿ ತಂದೆ, ಏಜೆಂಟ್ ಹಾಗೂ ಮೂವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ.

ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ಅಗತ್ಯ ಬಿದ್ದರೆ ಕೌನ್ಸಿಲಿಂಗ್ ಕೂಡ ನಡೆಸಲಾಗುವುದು. ಬಾಲಕಿಯ ತಂದೆ ಮದ್ಯವ್ಯಸನಿಯಾಗಿದ್ದು, ಸರಿಸುಮಾರು ಒಂದು ತಿಂಗಳಿನಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *