ಆ್ಯಪ್ ಡೌನ್‍ಲೋಡ್ ಮಾಡಿ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟಿದ್ದ 90 ಸಾವಿರ ಕಳೆದುಕೊಂಡ ತಂದೆ

ಮುಂಬೈ: ಮೊಬೈಲ್‍ಗೆ ಬಂದಿದ್ದ ಮೆಸೇಜ್ ನಂಬಿ ಆ್ಯಪ್ ಡೌನ್‍ಲೋಡ್ ಮಾಡಿ ವ್ಯಕ್ತಿಯೊಬ್ಬರು ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಕೂಡಿಟ್ಟಿದ್ದ 90 ಸಾವಿರ ರೂ. ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಮಾಯಕರು ಸೈಬರ್ ವಂಚಕರ ಜಾಲಕ್ಕೆ ಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂಬೈನ ಸಂಕೇತ್ ಕುಮಾರ್ ವರ್ಮಾ(35) ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಷ್ಟಪಟ್ಟು ಕೂಡಿಟ್ಟಿದ್ದ ಬರೋಬ್ಬರಿ 90 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಡಿಸೆಂಬರ್ 24ಕ್ಕೆ ವರ್ಮಾ ಅವರ ಮೊಬೈಲ್‍ಗೆ ಒಂದು ಮೆಸೇಜ್ ಬಂದಿತ್ತು. ಅದರಲ್ಲಿ ನಿಮ್ಮ ವಾಲೆಟ್‍ನನ್ನು ಲಾಕ್ ಮಾಡಲಾಗುತ್ತದೆ. ನೀವು ನಿಮ್ಮ ಅಕೌಂಟ್‍ನ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಬರೆದಿತ್ತು. ಇದನ್ನೂ ಓದಿ: ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

ಇದನ್ನು ನೋಡಿ ಗಾಬರಿಯಾದ ವರ್ಮಾ ಅವರು ತಕ್ಷಣ ಆ ಮೆಸೆಜ್‍ನಲ್ಲಿ ಇದ್ದ ನಂಬರ್‍ಗೆ ಫೋನ್ ಮಾಡಿ ವಿಚಾರಿಸಿದರು. ಆಗ ಫೋನ್‍ನಲ್ಲಿ ಮಾತನಾಡಿದ ವ್ಯಕ್ತಿ, ಮೆಸೆಜ್‍ನಲ್ಲಿರುವ ಲಿಂಕ್ ಓಪನ್ ಮಾಡಿ ಕ್ವಿಕ್ಕರ್ ಸಪೋರ್ಟ್ ಆ್ಯಪ್ ಡೌನ್‍ಲೋಡ್ ಮಾಡುವಂತೆ ಸೂಚಿಸಿದ್ದನು. ಆತನ ಸಲಹೆಯಂತೆ ವರ್ಮಾ ಅವರು ಆ್ಯಪ್ ಡೌನ್‍ಲೋಡ್ ಮಾಡಿ, ಅದರಲ್ಲಿ ನಮ್ಮ ವಿವರ ತುಂಬಿದರು. ಅವರ ಎರಡು ಬ್ಯಾಂಕ್ ಅಕೌಂಟ್ ವಿವರಗಳನ್ನು ಕೂಡ ವರ್ಮಾ ನೀಡಿದ್ದರು.

ಎಲ್ಲಾ ವಿವರಗಳು ಬರ್ತಿ ಮಾಡಿದ ಕೆಲ ನಿಮಿಷದಲ್ಲಿಯೇ ವರ್ಮಾ ಅವರ ಎರಡು ಅಕೌಂಟ್‍ನಲ್ಲಿದ್ದ 90 ಸಾವಿರ ರೂ. ಕಡಿತಗೊಂಡಿದೆ. ಆಗ ಮತ್ತೆ ಮೆಸೇಜ್‍ನಲ್ಲಿ ನೀಡಲಾಗಿದ್ದ ನಂಬರ್‍ಗೆ ಕರೆ ಮಾಡಿದರೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಕಂಗಾಲಾದ ವರ್ಮಾ ಅವರು ತಕ್ಷಣ ಪೊಲೀಸರ ಮೊರೆ ಹೋದರು. ಮಗನ ಚಿಕಿತ್ಸೆಗೆ ಹಣ ಕೂಡಿಟ್ಟಿದ್ದೆ ಎಲ್ಲವೂ ವಂಚನೆಯಾಯ್ತು ಎಂದು ತಂದೆ ಕಣ್ಣೀರಿಡುತ್ತಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿದ್ದರು. ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ವರ್ಮಾ ಅವರ ಬ್ಯಾಂಕ್ ಅಕೌಂಟ್‍ನಿಂದ ಯಾರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದೆ? ಆ ಅಕೌಂಟ್ ಯಾರ ಹೆಸರಿನಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಮುಂಬೈನ ವ್ಯಕ್ತಿಯೊಬ್ಬರು ಆನ್‍ಲೈನ್‍ನಲ್ಲಿ ವೈನ್ ಆರ್ಡರ್ ಮಾಡಿ 96 ಸಾವಿರ ರೂ. ಕಳೆದುಕೊಂಡಿದ್ದರು. ಆನ್‍ಲೈನ್ ವ್ಯವಹಾರದ ವೇಳೆ ಹಣ ಕಡಿತಗೊಂಡಿತ್ತು ಎಂದು ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ಕೊಟಿದ್ದರು.

Comments

Leave a Reply

Your email address will not be published. Required fields are marked *