ಬಟ್ಟೆ ಖರೀದಿಗೆ ಹಣ ಕೊಡೋದಾಗಿ ಕರೆಸಿ ಗರ್ಭಿಣಿ ಮಗಳನ್ನೇ ಕೊಂದ ತಂದೆ

ಮುಂಬೈ: ತಂದೆಯೊಬ್ಬ ತನ್ನ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದಕ್ಕೆ 20 ವರ್ಷದ ಗರ್ಭಿಣಿ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಮುಂಬೈನ ಘಾಟ್ಕೋಪರ್ ನಲ್ಲಿ ನಡೆದಿದೆ.

ಸಂತ್ರಸ್ತೆಯನ್ನು ಮೀನಾಕ್ಷಿ ಚೌರಾಸಿಯಾ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ರಾಜ್‍ಕುಮಾರ್ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಭಾನುವಾರ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ಶವ ಸಿಕ್ಕಿತ್ತು. ನಂತರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇತ್ತ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಮರುದಿನ ಮುಂಬೈ ಪೊಲೀಸರು ಮೀನಾಕ್ಷಿಯ ತಂದೆಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ಮೀನಾಕ್ಷಿ ಚೌರಾಸಿಯಾ ಬ್ರಿಜೇಶ್‍ನನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕೆ ಮೀನಾಕ್ಷಿ ತನ್ನ ತಂದೆ ರಾಜ್‍ಕುಮಾರ್ ನೋಡಿದ ಇಬ್ಬರು ಯುವಕರನ್ನು ಎರಡು ಬಾರಿ ತಿರಸ್ಕರಿಸಿದ್ದಳು. ಕೊನೆಗೆ ಬ್ರಿಜೇಶ್ ಜೊತೆ ಓಡಿಹೋಗಿ ಫೆಬ್ರವರಿಯಲ್ಲಿ ತಂದೆಯ ವಿರೋಧವಿದ್ದರೂ ಮಧ್ಯಪ್ರದೇಶದ ಸತ್ನಾದಲ್ಲಿ ಮದುವೆಯಾಗಿದ್ದಳು ಎಂದು ಡಿಸಿಪಿ ಅಖಿಲೇಶ್ ಸಿಂಗ್ ಹೇಳಿದ್ದಾರೆ.

ಅಂದಿನಿಂದ ಮೀನಾಕ್ಷಿ ಮತ್ತು ಆಕೆಯ ತಂದೆ ರಾಜ್‍ಕುಮಾರ್ ನಡುವೆ ಬಿರುಕು ಉಂಟಾಗಿತ್ತು. ಇತ್ತೀಚೆಗೆ ಮೀನಾಕ್ಷಿ ಗರ್ಭಿಣಿಯಾಗಿದ್ದಳು. ಶನಿವಾರ ಸಂಜೆ ಆರೋಪಿ ತಂದೆ ಬಟ್ಟೆ ಖರೀದಿಸಲು ಹಣ ನೀಡುವ ನೆಪದಲ್ಲಿ ಮೀನಾಕ್ಷಿಗೆ ಕರೆ ಮಾಡಿ ಮುಂಬೈಗೆ ಕರೆಸಿಕೊಂಡಿದ್ದನು. ಮಗಳು ಬಂದಾಗ ಉದ್ದೇಶ ಪೂರ್ವಕವಾಗಿ ಹಣವನ್ನು ಕೆಳಗೆ ಬೀಳಿಸಿ ಅದನ್ನು ಎತ್ತಿ ಕೊಡುವಂತೆ ಮಗಳಿಗೆ ಕೇಳಿದ್ದಾನೆ. ಮೀನಾಕ್ಷಿ ಹಣವನ್ನು ಎತ್ತಿಕೊಳ್ಳಲು ಬಾಗಿದಾಗ ಆಕೆಗೆ ಚಾಕುನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ಕುರಿತು ತನಿಖೆ ಮಾಡುವಾಗ ಪೋಷಕರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಪೊಲೀಸರ ಪ್ರಶ್ನೆಗೆ ರಾಜ್‍ಕುಮಾರ್ ಸರಿಯಾಗಿ ಉತ್ತರಿಸಲಿಲ್ಲ. ನಂತರ ಆತನ ಮೊಬೈಲ್ ಸಿಗ್ನಲ್ ಟ್ರ್ಯಾಕ್ ಮಾಡಿದಾಗ ಮೀನಾಕ್ಷಿ ಕೊಲೆಯಾದ ಸ್ಥಳದಲ್ಲಿದ್ದದ್ದು ಪತ್ತೆಯಾಗಿದೆ. ತಕ್ಷಣ ಆರೋಪಿ ರಾಜ್‍ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *