ಬೈಕ್‌ ಬಿಟ್ಟು ಬಂದಿದ್ದಕ್ಕೆ ಹೆಲ್ಮೆಟ್‌ನಿಂದ ಹೊಡೆದ ಮಗನನ್ನು ಇರಿದು ಕೊಂದ ತಂದೆ!

ಬೆಂಗಳೂರು: ದ್ವಿಚಕ್ರ ವಾಹನ ಎಲ್ಲೋ ಬಿಟ್ಟು ಮನೆಗೆ ಬಂದಿದ್ದ ವಿಚಾರಕ್ಕೆ ಜಗಳ ನಡೆದು ತಂದೆಯೇ (Father) ಮಗನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಮುದ್ದನಪಾಳ್ಯದಲ್ಲಿ ನಡೆದಿದೆ.

ಅಂಜನ್ ಕುಮಾರ್(27) ಕೊಲೆಯಾದ ಮಗ. ವೆಂಕಟೇಶ್ (57) ಬಂಧಿತ ಆರೋಪಿ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ಏನಿದು ಘಟನೆ?
ವೆಂಕಟೇಶ್ ತನ್ನ ಕುಟುಂಬದ ಜೊತೆಗೆ ಮುದ್ದನಪಾಳ್ಯದಲ್ಲಿ ನೆಲೆಸಿದ್ದು, ರಿಯಲ್ ಎಸ್ಟೇಟ್‌ (Real Estate) ಬ್ರೋಕರ್‌ ಕೆಲಸ ಮಾಡುತ್ತಿದ್ದ. ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂಜನ್‌ ಪಿಯುಸಿ ಮೊಟಕುಗೊಳಿಸಿ ಮನೆಯಲ್ಲಿ ಇರುತ್ತಿದ್ದ. ಇದನ್ನೂ ಓದಿ: ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ

ಭಾನುವಾರ ಸಂಜೆ ವೆಂಕಟೇಶ್‌ ಮಗಳ ದ್ವಿಚಕ್ರ ವಾಹನವನ್ನು (Two Wheeler) ತೆಗೆದುಕೊಂಡು ಹೊರಗೆ ಹೋಗಿದ್ದರು. ಆದರೆ ರಾತ್ರಿ ದ್ವಿಚಕ್ರ ವಾಹನದ ಜೊತೆ ಮನೆಗೆ ಬಂದಿರಲಿಲ್ಲ,

ಬೈಕ್ ವಿಚಾರವಾಗಿ ಅಂಜನ್ ಕುಮಾರ್, ತಂದೆ ವೆಂಕಟೇಶ್‌ನನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ವೆಂಕಟೇಶ್‌ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ ಮಾತಿಗೆ ಮಾತು ಬೆಳೆದು ಅಂಜನ್‌ ಹೆಲ್ಮೆಟ್‌ನಿಂದ ತಂದೆಗೆ ಹೊಡೆದಿದ್ದಾನೆ.

 

ತನ್ನ ಮೇಲೆಗೆ ಮಗ ಹೊಡೆದಿದ್ದಕ್ಕೆ ಸಿಟ್ಟಾದ ತಂದೆ ವೆಂಕಟೇಶ್‌ ಅಡುಗೆ ಮನೆಗೆ ತೆರಳಿ ಚಾಕು ತಂದು ಅಂಜ್‌ನ ಎಡಭಾಗದ ಎದೆಗೆ ಇರಿದಿದ್ದಾನೆ. ವಿಪರೀತ ರಕ್ತಸ್ರಾವದಿಂದಾಗಿ ಅಂಜನ್‌ ಅಲ್ಲೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.