ಮಗ ಮನೆ ಬಿಟ್ಟು ಹೊರಗಡೆ ಮಜಾ ಮಾಡುತ್ತಾನೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದ ತಂದೆ

– ನ್ಯಾಯಮಂಡಳಿ ಖಡಕ್ ಆದೇಶಕ್ಕೆ ತಲೆ ಬಾಗಿದ ಮಗ

ರಾಯಚೂರು: ದಿನಗೂಲಿ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೂ ಹಿರಿಯ ಮಗ ಪೋಷಕರ ಜೀವನಕ್ಕೆ ಆಧಾರವಾಗದೆ ಮನೆ ಬಿಟ್ಟು ಬೇರೆಡೆ ಐಶಾರಾಮಿ ಜೀವನ ನಡೆಸುತ್ತಿದ್ದಕ್ಕೆ ತಂದೆ ಮಗನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿ ಗೆದ್ದಿದ್ದಾನೆ.

ನಗರದ ನಿವಾಸಿ ಬೂದೆಪ್ಪ (ಹೆಸರು ಬದಲಾಯಿಸಲಾಗಿದೆ) ಪ್ರತಿ ದಿನ ಕೂಲಿ ಕೆಲಸ ಮಾಡಿ ಐದು ಜನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ನಾಲ್ಕು ಜನ ಮಕ್ಕಳು ಇನ್ನೂ ಓದುತ್ತಿದ್ದಾರೆ. ಹಿರಿಯ ಮಗ ವರಪ್ರಸಾದ್ (ಹೆಸರು ಬದಲಾಯಿಸಲಾಗಿದೆ) ಓದು ಮುಗಿಸಿ ಮೊಬೈಲ್ ಕಂಪೆನಿಯೊಂದರಲ್ಲಿ ನೆಟ್‍ವರ್ಕ್ ಪ್ಲಾನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ 43 ಸಾವಿರ ರೂ. ಸಂಬಳ ಬರುತ್ತಿದ್ದು ಮನೆಗೆ ನಯಾಪೈಸೆ ಕೊಡುತ್ತಿರಲಿಲ್ಲ.

ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಭವಾದ ಮೇಲೆ ಹಿರಿಯ ಮಗ ಮನೆಗೆ ಸರಿಯಾಗಿ ಬಾರದೇ ಹೋಟೆಲ್‍ನಲ್ಲಿಯೇ ಊಟ ಮಾಡಿಕೊಂಡು ಊರು ಊರು ಅಲೆಯುತ್ತಾ ಮನೆಗೆ ಬರುವುದನ್ನೆ ಕಡಿಮೆ ಮಾಡಿದ್ದಾನೆ. ಇದರಿಂದ ಮನೆಯ ಪರಿಸ್ಥಿತಿ ಕಷ್ಟಕರವಾಗಿದ್ದು ತಂದೆ-ತಾಯಿಗೆ ಮನೆ ನಡೆಸುವುದು ಕಷ್ಟವಾಗಿದೆ. ಇದರಿಂದ ಬೇಸತ್ತ ತಂದೆ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದಾರೆ.

ವಾದ-ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ್ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ಮಾಡಿದ್ದಾರೆ.

ಆದೇಶದಲ್ಲೇನಿದೆ?
ಪ್ರತಿ ತಿಂಗಳು 10ರೊಳಗೆ ಆರ್‌ಟಿಜಿಎಸ್‌ ಮೂಲಕ 20 ಸಾವಿರ ರೂ. ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ತಿಂಗಳಿಗೊಮ್ಮೆ ತಂದೆ-ತಾಯಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಬೇಕು. ಭಾನುವಾರ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು ಎಂದು ಆದೇಶ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತಂದೆ ಹಾಗೂ ಮಗ ಒಪ್ಪಿದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.

Comments

Leave a Reply

Your email address will not be published. Required fields are marked *