S-400ಗೆ ಟಕ್ಕರ್‌ ಕೊಡಲು ತನ್ನದೇ ಮಿಸೈಲ್‌ ಅಭಿವೃದ್ಧಿಪಡಿಸಿದ ಪಾಕ್‌ – ಇದು ಬ್ರಹ್ಮೋಸ್‌ಗಿಂತ ಶಕ್ತಿಶಾಲಿಯೇ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸವು (Pahalgam Terrorist Attack) ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಇಡೀ ದೇಶವೇ ಒಗ್ಗೂಡುವಂತೆ ಮಾಡಿದೆ. ಅಷ್ಟೇ ಅಲ್ಲದೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕ್‌ ಮಾನವನ್ನ ವಿಶ್ವವೇದಿಕೆಗಳಲ್ಲಿ ಕಳೆಯುವ ಭಾರತದ ಪ್ರಯತ್ನಕ್ಕೆ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಮತ್ತೊಂದು ಕಡೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತದ ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದ್ದಂತೆ ಭಾರತ ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಬೆನ್ನಲ್ಲೇ ಚೀನಾ ನಿರ್ಮಿತ ರೆಡಾರ್‌ ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನ ನಂಬಿ ಕೆಟ್ಟಿದ್ದ ಪಾಕ್‌ ಇದೀಗ ಸ್ವದೇಶದಲ್ಲೇ ಶಕ್ತಿಶಾಲಿ ಅಸ್ತ್ರ ತಯಾರಿಕೆಗೆ ಮುಂದಾಗಿದೆ.

ಹೌದು. ಭಾರತದ ಬ್ರಹ್ಮೋಸ್‌ಗೆ ಸರಿಸಮನಾದ ಹಾಗೂ ಎಸ್‌-400 ವಾಯುರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸಿ ನಿಖರ ಗುರಿ ಮೇಲೆ ದಾಳಿ ನಡೆಸಬಲ್ಲ ಶಕ್ತಿಶಾಲಿ ಅಸ್ತ್ರ ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿ ಫತಾಹ್-IV (Fatah-IV Missile) ಅನ್ನು ತಯಾರಿಸಿದೆ. ಇತ್ತೀಚೆಗಷ್ಟೇ ಇದರ ಪ್ರಯೋಗ ನಡೆಸಿದ್ದು, ಯಶಸ್ಸು ಕಂಡುಕೊಂಡಿದೆ. 750 ಕಿಮೀ ವ್ಯಾಪ್ತಿ ಹೊಂದಿರುವ ಈ ಕ್ಷಿಪಣಿ ಗಂಟೆಗೆ 865 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದ್ರೆ ಭಾರತ ಬ್ರಹ್ಮೋಸ್‌ 800 ಕಿಮೀ ವ್ಯಾಪ್ತಿ ಹೊಂದಿದೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಅಷ್ಟಕ್ಕೂ ಪಾಕಿಸ್ತಾನ ಈ ಮಿಸೈಲ್‌ ತಯಾರಿಕೆಗೆ ಕೈಹಾಕೋದಕ್ಕೆ ಕಾರಣ ಏನು ಎಂಬುದನ್ನ ಮೊದಲ ತಿಳಿಯೋಣ…

ಚೀನಾ ನಿರ್ಮಿತ ರೆಡಾರ್‌ ನಂಬಿ ಕೆಟ್ಟಿದ್ದ ಪಾಕ್‌
ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ಮೇ 7ರಂದು ದೇಶಾದ್ಯಂತ ಮಾಕ್‌ ಡ್ರಿಲ್‌ ನಡೆಸಲು ಕರೆ ಕೊಟ್ಟಿತ್ತು. ಆದ್ರೆ ಅಚ್ಚರಿ ಎನಿಸುವಂತೆ ಅಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ನಡೆಸಿ ಯಾರೂ ಊಹಿಸದ ರೀತಿಯಲ್ಲಿ ಪಾಕ್‌ಗೆ (Pakistan) ಶಾಕ್‌ ಕೊಟ್ಟಿತ್ತು. ಆದ್ರೆ ಪಾಕಿಸ್ತಾನವು ತನ್ನ ರಕ್ಷಣಾ ವ್ಯವಸ್ಥೆಗೆ ಅಳವಡಿಸಿಕೊಂಡಿರುವ ಚೀನಾದ (China) ತಂತ್ರಜ್ಞಾನ ಆಧರಿತ ರೆಡಾರ್‌ ವ್ಯವಸ್ಥೆಯು ಸೂಕ್ತ ಸಮಯದಲ್ಲಿ ಕ್ಷಿಪಣಿಗಳನ್ನ ಪತ್ತೆ ಹಚ್ಚಲು ಸಾಧ್ಯವಾಗದೇ ಬಹುದೊಡ್ಡ ವೈಫಲ್ಯ ಅನುಭವಿಸಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ರಕ್ಷಣಾ ಉತ್ಪನ್ನಗಳ ಬಗ್ಗೆ ಪ್ರಶ್ನೆ ಮಾಡುವಂತಾಗಿತ್ತು.

ಅಲ್ಲದೇ ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿದ್ದು ಇದೇ ಮೊದಲಾಗಿರಲಿಲ್ಲ. 2019ರ ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಸಂದರ್ಭದಲ್ಲೂ ಇದೇ ರೀತಿ ಪಾಕಿಸ್ತಾನದ ರೆಡಾರ್‌ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿತ್ತು. ಆಗ ಪಾಕಿಸ್ತಾನ ಚೀನಾ ನಿರ್ಮಿತ ರಾಡಾರ್‌ಗಳ ಮೊರೆ ಹೋಗಿತ್ತು. ಮೊದಲ ಬ್ಯಾಚ್‌ನ 6 ರೆಡಾರ್‌ ಸಿಸ್ಟಮ್‌ಗನ್ನ 2015 ಮತ್ತು 2016ರಲ್ಲಿ ಚೀನಾ ಪಾಕ್‌ಗೆ ಹಸ್ತಾಂತರ ಮಾಡಿತ್ತು. ಅಷ್ಟೇ ಅಲ್ಲದೇ ಚೀನಾದಿಂದ ಪಾಕ್‌ 9 LY-80 LOMADS (ಕಡಿಮೆ ಮತ್ತು ಮಧ್ಯಮ ಎತ್ತರದ ವಾಯು ರಕ್ಷಣಾ ವ್ಯವಸ್ಥೆಗಳು) ಖರೀದಿಸಿತ್ತು. ಇದನ್ನು ವಿಶ್ವದ ಅತ್ಯಂತ ಮುಂದುವರಿದ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದು ಎಂದು ಚೀನಾ ಬುರುಡೆ ಬಿಟ್ಟಿತ್ತು. ʻಆಪರೇಷನ್‌ ಸಿಂಧೂರʼ ವೇಳೆ ಪಾಕ್‌ ಮಿಸೈಲ್‌ಗಳ ದಾಳಿ ತಡೆಯುವಲ್ಲಿ ವಿಫಲವಾದ ಬಳಿಕ ಪಾಕ್‌ ನಿರೀಕ್ಷೆ ಸುಳ್ಳಾಗಿತ್ತು.

ಪಾಕ್‌ನ ಶಸ್ತ್ರಾಸ್ತ್ರಗಳು ಠುಸ್‌
ಇಷ್ಟಲ್ಲದೇ ಭಾರತದ ದಾಳಿಗೆ ಪ್ರತಿದಾಳಿ ನಡೆಸಲು ಹೊಂಚು ಹಾಕಿದ್ದ ಪಾಕಿಸ್ತಾನವು ಭಾರತದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ ಗಡಿ ಸೇರಿದಂತೆ ಭಾರತದ ಒಟ್ಟು 36 ಕಡೆ ದಾಳಿ ನಡೆಸಿತ್ತು. ಎರಡು ದಿನಗಳಲ್ಲಿ (ಮೇ 8, 9) 300-400 ಮಿಸೈಲ್‌ಗಳು, ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನ ಭಾರತ ವಿಫಲಗೊಳಿಸಿತು. ಜೊತೆಗೆ ಪಾಕಿಸ್ತಾನ ಮಿಲಿಟರಿಯಲ್ಲಿ ಶಕ್ತಿಶಾಲಿ ಅಸ್ತ್ರಗಳೆಂದು ಕರೆಯುತ್ತಿದ್ದ F-16, JF-17, J-10 ಮತ್ತು Saab-2000 Erieye AWACS (ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ‌ವಿಮಾನವನ್ನು ಛಿದ್ರಗೊಳಿಸಿ, ಶತಕೋಟಿ ನಷ್ಟ ಉಂಟುಮಾಡಿತು. ಇದರಿಂದ ಪಾಕಿಸ್ತಾನ ತೀರಾ ಕಂಗೆಟ್ಟು ಕೊನೆಗೆ ತಾನೇ ಯುದ್ಧ ಗೆದ್ದಿರುವುದಾಗಿ ತನ್ನ ದೇಶದ ಜನತೆಯನ್ನ ಮಂಗ ಮಾಡಿತ್ತು. ಈ ಬೆನ್ನಲ್ಲೇ ಹೊಸ ಅಸ್ತ್ರ ತಯಾರಿಸಿದೆ.

ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ
ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ

ಸುದರ್ಶನ ಚಕ್ರದ ಕಣ್ತಪ್ಪಿಸುತ್ತಾ – ಫತಾಹ್‌-4?
ಸದ್ಯ ಪಾಕ್‌ ಸೇನೆ ಈಗ ಹೇಳಿಕೊಳ್ಳುತ್ತಿರುವಂತೆ ಫತಾಹ್‌-IV ನೆಲದಿಂದ ಹಾರಿಸಲ್ಪಡುವ ಕ್ಷಿಪಣಿಯಾಗಿದ್ದು, ವಾಯು ರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸುವ ತಂತ್ರಜ್ಞಾನ ಹೊಂದಿದೆ. ಅದರಂತೆ ಭಾರತದ ಎಸ್‌-400 ರಕ್ಷಣಾ ವ್ಯವಸ್ಥೆಯನ್ನ ಭೇದಿಸುವ ಸಾಮರ್ಥ್ಯ ಹೊಂದಿದ್ದು, ಪಾಕ್‌ ಸೇನೆಗೆ ಮತ್ತಷ್ಟು ಬಲ ತುಂಬಿದೆ. ಇದಕ್ಕಾಗಿ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ISPR ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು ಮಿಸೈಲ್‌ ಅಭಿವೃದ್ಧಿಪಡಿಸಿದ ವಿಜ್ಞಾನಿಗಳನ್ನ ಅಭಿನಂದಿಸಿದ್ದಾರೆ.

ಫತಾಹ್‌-4ನ ವಿಶೇಷತೆ ಏನು?
1,530 ಕೆಜಿ ತೂಕವಿರುವ ಫತಾಹ್‌-4 ಕ್ಷಿಪಣಿ 750 ಕಿಮೀ ವ್ಯಾಪ್ತಿ ಹೊಂದಿದೆ. 7.5 ಮೀಟರ್‌ ಉದ್ದ ಇರಲಿದ್ದು, 0.7 ಮ್ಯಾಕ್‌ ವೇಗದಲ್ಲಿ ಅಂದ್ರೆ864 ಕಿಮೀ ವೇಗದಲ್ಲಿ, ಕನಿಷ್ಠ 50 ಮೀಟರ್‌ ಎತ್ತರದಲ್ಲಿ ಹಾರುತ್ತದೆ. ಬ್ಲಾಸ್ಟ್‌ ಫ್ರಾಂಗ್ಮೆಂಟೇಶನ್‌ ಮಾದರಿಯ ಸಿಡಿತಲೆ ಹೊಂದಿದ್ದು, 330 ಕೆಜಿಯಷ್ಟು ತೂಕ ಇರಲಿದೆ. ಮ್ಯಾಕ್‌ ಅಂದ್ರೆ ಶಬ್ಧದ ವೇಗವನ್ನು ಅಳೆಯುವ ಮಾಪನ.

ಫತಾಹ್‌-4 ಅಸ್ತಿತ್ವವನ್ನು ಮೊದಲು 2024ರಲ್ಲಿ ಪಾಕ್‌ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಹಿರಂಗಪಡಿಸಿತ್ತು. ಆ ಸಂದರ್ಭದಲ್ಲಿ 450 ಕಿಮೀ ವ್ಯಾಪ್ತಿಯ ಫತಾಹ್‌-III ಕ್ಷಿಪಣಿಯನ್ನಷ್ಟೇ ಪಾಕ್‌ ಅಭಿವೃದ್ಧಿಪಡಿಸಿತ್ತು. ಭಾರತದ ಜೊತೆಗಿನ ಸಂಘರ್ಷಕ್ಕೂ ಮುನ್ನ ಫತಾಹ್‌ ಮುಂದುವರಿದ ಭಾಗ 4 ಸರಣಿ ಕ್ಷಿಪಣಿ ವ್ಯವಸ್ಥೆಯನ್ನ ಪರಿಕ್ಷಿಸಲಾಗಿತ್ತು. ಇತ್ತೀಚೆಗೆ ಅಧಿಕೃತವಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಭಾರತದ ಬ್ರಹ್ಮೋಸ್‌ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ.

ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ. ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದುರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್‌ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್‌ ಜಾಮಿಂಗ್‌ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು 2001ರ ಜೂನ್‌ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ. ಭಾರತ ಇಲ್ಲಿಯವರೆಗೆ ಯಾವುದೇ ಕಾರ್ಯಾಚರಣೆಗೆ ಬ್ರಹ್ಮೋಸ್‌ ಬಳಸಿರಲಿಲ್ಲ. ಆದರೆ ಪಾಕ್‌ ವಿರುದ್ಧದ ಸಂಘರ್ಷದ ವೇಳೆ ಇದನ್ನು ಬಳಸಿತ್ತು. ನಿಖರ ದಾಳಿಯಿಂದಾಗಿ ಈಗ ಸ್ವದೇಶಿ ಬ್ರಹ್ಮೋಸ್‌ ವಿಶ್ವದೆಲ್ಲೆಡೆ ಫೇಮಸ್‌ ಆಗಿದೆ.

ಒಟ್ಟಿನಲ್ಲಿ ಮೂರು ಯುದ್ಧಗಳಲ್ಲಿ ಸೋತಿದ್ದ ಪಾಕ್‌, ಆಪರೇಷನ್‌ ಸಿಂಧೂರದಲ್ಲೂ ಭಾರತದ ಎದುರು ಮಂಡಿಯೂರಬೇಕಾಯಿತು. ಈಗ ಭಾರತದ ಶಕ್ತಿಶಾಲಿ ಅಸ್ತ್ರಗಳಿಗ ಠಕ್ಕರ್‌ ಕೊಡಲು ಹೊಸ ಹೊಸ ಸ್ವದೇಶಿ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ತೊಡಗಿದೆ. ಇತ್ತ ಸದಾ ಅಲರ್ಟ್‌ ಆಗಿರುವ ಭಾರತದ ಸೇನಾಪಡೆ ಮುಖ್ಯಸ್ಥರು ಮತ್ತೊಮ್ಮೆ ಪಾಕ್‌ ನಮ್ಮ ತಂಟೆಗೆ ಬಂದ್ರೆ ವಿಶ್ವ ಭೂಪಟದಲ್ಲೇ ಅಳಿಸಿಹೋಗುವಂತೆ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಪಾಕ್‌ ಕೆಣಕಿದ್ರೆ ಮಣ್ಣು ಮುಕ್ಕಿಸೋದಂತೂ ಖಚಿತವಾಗಿದೆ.