ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಕಾಯ್ದೆಗಳು ಸಂಪೂರ್ಣ ರದ್ದಾಗುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ದೆಹಲಿ ಗಡಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.

ಕೃಷಿ ಕಾಯ್ದೆಗಳ ರದ್ದುಗೊಳಿಸುವುದು ಸೇರಿದಂತೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕು ಹಾಗೂ ಕಳೆದ ಒಂದು ವರ್ಷದಿಂದ ನಡೆದ ಪ್ರತಿಭಟನೆಯಲ್ಲಿ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಈಗ ರದ್ದಾಗಿದ್ರೂ ಅಗತ್ಯ ಎನಿಸಿದ್ರೆ ಮತ್ತೆ ಕೃಷಿ ಕಾಯ್ದೆ ಜಾರಿ: ರಾಜಸ್ಥಾನ ರಾಜ್ಯಪಾಲ

ನವೆಂಬರ್‌ ತಿಂಗಳ ಅಂತ್ಯದಲ್ಲಿ ನಡೆಯುವ ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಈ ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಗುವುದು.

ಕೃಷಿ ಕಾನೂನುಗಳ ಕುರಿತು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಯುಕ್ತ ಕಿಸಾನ್‌ ಮಾರ್ಚ್‌ (ಎಸ್‌ಕೆಎಂ) ಪೂರ್ವ ನಿರ್ಧಾರಿತ ಕಾರ್ಯಕ್ರಮಗಳನ್ನು ಹಾಗೆಯೇ ಮುಂದುವರಿಸುತ್ತೇವೆ ಎಂದು ರೈತ ನಾಯಕ ಬಲ್ಬೀರ್‌ ಸಿಂಗ್‌ ರಾಜೇವಾಲ ತಿಳಿಸಿದ್ದಾರೆ. ಇದನ್ನೂ ಓದಿ: ತಿದ್ದುಪಡಿಯೊಂದಿಗೆ ಕೃಷಿ ಮಸೂದೆ ಮತ್ತೆ ಮಂಡನೆ ಆಗುತ್ತೆ: ಪ್ರಭಾಕರ ಭಟ್

ಲಕ್ನೋದಲ್ಲಿ ನ.22ಕ್ಕೆ ನಿಗದಿಪಡಿಸಿರುವ ರೈತರ ಸಭೆ, ನ.26ರಂದು ಪಾರ್ಲಿಮೆಂಟ್‌ಗೆ ರೈತರ ಮಾರ್ಚ್‌ ನಡೆಸಲು ನಿರ್ಧರಿಸಲಾಗಿದ್ದು, ಅದನ್ನು ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ರೈತರು ಪತ್ರ ಬರೆದಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದರು. ಈ ನಿರ್ಧಾರವನ್ನು ಕೇಳಿ ರೈತರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಆದರೆ ಕೃಷಿ ಕಾಯ್ದಗಳನ್ನು ಅಧಿವೇಶನದಲ್ಲಿ ಅಧಿಕೃತವಾಗಿ ರದ್ದುಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

Comments

Leave a Reply

Your email address will not be published. Required fields are marked *