ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರಿಗೆ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು

ವಿಜಯಪುರ: ಡೋಣಿ ನದಿ ದಾಟುವಾಗ ಡಬಲ್ ಟ್ರಾಲಿ ಸಮೇತ ನದಿಯಲ್ಲಿ ಕೊಚ್ಚಿಹೋದ ಟ್ರ್ಯಾಕ್ಟರ್ ಇಂಜಿನ್ ಅನ್ನು ರೈತರು ಹಗ್ಗ ಕಟ್ಟಿ ಹೊರತೆಗೆದಿದ್ದಾರೆ. ಈ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದಿದೆ.

ತಾಳಿಕೋಟೆಯ ರಾಜು ಬೀಳಗಿ ಅವರು ಶುಕ್ರವಾರ ಟ್ರ್ಯಾಕ್ಟರ್ ನಲ್ಲಿ ಕಡಕೋಳದಿಂದ ಕೊಂಡಗೂಳು ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡೋಣಿ ನದಿ ದಾಟಲು ಸೇತುವೆ ಇಲ್ಲದ ಕಾರಣ ರಾಜು ಹಾಗೂ ಅವರ ಜೊತೆ ಮನ್ಸೂರ್ ಬೀಳಗಿ ಕಚ್ಚಾ ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ನದಿಯಲ್ಲಿ ಪ್ರವಾಹ ಉಂಟಾಗಿ ಟ್ರ್ಯಾಕ್ಟರ್ ಜೊತೆಯಲ್ಲಿಯೇ ರಾಜೂ ಹಾಗೂ ಮನ್ಸೂರ್ ನೀರಿಗೆ ಕೊಚ್ಚಿಹೋಗಿದ್ದರು. ಆದರೆ ಹೇಗೋ ಇಬ್ಬರೂ ಈಜಿಕೊಂಡು ದಡ ಸೇರಿದರು. ಆದರೆ ಟ್ರ್ಯಾಕ್ಟರ್ ಮಾತ್ರ ಪ್ರವಾಹದ ಮಧ್ಯೆಯೇ ಸಿಲುಕಿಕೊಂಡಿತ್ತು. ಇದನ್ನೂ ಓದಿ:ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

ಇದನ್ನು ಕಂಡ ಸ್ಥಳೀಯ ರೈತರು ರಾಜೂ ಹಾಗೂ ಮನ್ಸೂರ್ ಅವರ ಸಹಾಯಕ್ಕೆ ಬಂದಿದ್ದಾರೆ. ಜೆಸಿಬಿ ತರಿಸಿ ಅದಕ್ಕೆ ಹಗ್ಗ ಕಟ್ಟಿ ಆ ಹಗ್ಗದ ಮೂಲಕ ಪ್ರವಾಹದಲ್ಲಿ ಸಿಲುಕಿದ್ದ ಟ್ರ್ಯಾಕ್ಟರ್ ಅನ್ನು ಹರಸಾಹಸ ಪಟ್ಟು ಎಳೆದು ದಡಕ್ಕೆ ತಂದಿದ್ದಾರೆ. ಈ ಕಾರ್ಯಾಚರಣೆ ನಡೆಸಲು ಕಡಕೋಳ ಗ್ರಾಮಸ್ಥರು ಸುಮಾರು ಐದು ಗಂಟೆಗಳವರೆಗೆ ಶ್ರಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಡೋಣಿ ನದಿಯನ್ನು 200 ಮೀಟರ್ ದಾಟಿದರೆ ಒಂದು ಕಿ.ಮಿ ಅಂತರದಲ್ಲಿ ಜಮೀನುಗಳಿವೆ. ಹೀಗಾಗಿ ರೈತರು ನದಿ ದಾಟಿಕೊಂಡು ಜಮೀನುಗಳಿಗೆ ತೆರಳುತ್ತಾರೆ. ಇಲ್ಲವಾದಲ್ಲಿ ರೈತರು ಜಮೀನಿಗೆ ಹೋಗಲು ಸುಮಾರು 30 ಕಿ.ಮಿ ಸುತ್ತುಹಾಕಬೇಕಾಗುತ್ತದೆ. ಹೀಗಾಗಿ ಸುತ್ತುವರಿದು ಯಾಕೇ ಹೋಗಬೇಕು, ಹತ್ತಿರದ ಮಾರ್ಗದಲ್ಲೇ ಹೋಗೋಣ ಎಂದು ತುಂಬಿ ಹರಿಯುವ ನದಿಯಲ್ಲೇ ಟ್ರ್ಯಾಕ್ಟರ್ ದಾಟಿಸಲು ಹೋಗಿ ರಾಜೂ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಸೇತುವೆ ಇಲ್ಲದ ಕಾರಣ ಇವರಂತೆ ಇತರೆ ರೈತರು ಸಹ ನದಿ ದಾಟಿಯೇ ಜಮೀನುಗಳಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಡೋಣಿ ನದಿ ದಾಟಲು ರೈತರು ಪರದಾಟ ನಡೆಸುತ್ತಾರೆ.

ಮುಂದೆ ಈ ರೀತಿ ಅನಾಹುತಗಳು ನಡೆಯಬಾರದು, ಹೀಗಾಗಿ ಡೋಣಿ ನದಿಗೆ 200 ಮೀಟರ್ ಉದ್ದದ ಸೇತುವೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *