ಮಂಗಳೂರು: ರೈತರ ಸಾಲಮನ್ನಾ ಕುರಿತು ಭಾವಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ.
ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೂರ್ಣ ಬಹುಮತ ಬಂದ್ರೆ ರೈತರ ಸಾಲಮನ್ನಾ ಎಂದಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ. ಆದರೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತೇನೆ ಅಂತ ಹೇಳಿದ್ದಾರೆ.
ರೈತರ ಸಾಲಮನ್ನಾ ವಿಚಾರದಲ್ಲಿ ಯಾರೂ ಗಾಬರಿಯಾಗಬೇಕಾಗಿಲ್ಲ. ರಾಜ್ಯದ ರೈತರಿಗೆ ಸಂಪೂರ್ಣವಾದ ಸಹಕಾರ ಕೊಟ್ಟಾಗ ಸಾಲಮನ್ನಾ ಮಾಡುತ್ತೇನೆ ಅನ್ನೋ ಘೋಷಣೆ ಮಾಡಿದ್ದೆ. ಆದ್ರೆ ನನಗೆ ಸಂಪೂರ್ಣ ಸಹಕಾರ ಕೊಡದೇ ಇದ್ದರೂ, ಈ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ರೈತ ಉಳಿಯಬೇಕು. ಹೀಗಾಗಿ ನನ್ನ ರೈತ ಉಳಿಯಲು ನಾನು ಏನ್ ಕಾರ್ಯಕ್ರಮ ಕೊಡುತ್ತೇನೆ ಹಾಗೂ ಘೋಷಣೆ ಮಾಡಿರುವುದೆಲ್ಲವನ್ನು ವಿಶ್ವಾಸ ಮತ ಸಾಬೀತು ಮಾಡಿದ ಬಳಿಕ ಹೇಳುತ್ತೇನೆ ಎಂದರು.
ಇದೇ ವೇಳೆ ನಾಡಿನಲ್ಲಿ ಉತ್ತಮವಾದ ಮಳೆ ಹಾಗೂ ನನ್ನ ರೈತ ಉತ್ತಮವಾದ ಬೆಳೆಯನ್ನು ಬೆಳೆಯಬೇಕು ಅಂತ ನಾನು ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಅಂದ್ರು.
ಪ್ರಚಾರದ ಸಂದರ್ಭದಲ್ಲಿ ನನ್ನ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು.

Leave a Reply