ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

ಮಂಡ್ಯ: ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು. ನಮ್ಮ ಹತ್ತಿರ ದುಡ್ಡು ಕೇಳ್ತಿರಲ್ಲ ನಾಚಿಕೆಯಾಗಲ್ವ ನಿಮ್ಗೆ. ಯಾರ ಮನೆ ಅಡವಿಟ್ಟು ದುಡ್ಡು ತಂದು ಕೊಡೋಣ. ಹೊಟ್ಟೆಗೆ ಅನ್ನ ತಿಂತೀರಾ? ಏನು ತಿಂತೀರಾ ಎಂದು ಅಧಿಕಾರಿಗಳನ್ನು ಜನ ಸಂಪರ್ಕ ಸಭೆಯಲ್ಲಿ ರೈತರರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

ಕೆ.ಆರ್ ಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿ ಆವರಣದಲ್ಲಿ, ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ರೈತರ ರಕ್ತ ಕುಡಿಯಲು ಹುಟ್ಟಿದ್ದೀರ ನೀವು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಲಂಚ ಕೊಟ್ಟವರಿಗೆ ವಿದ್ಯುತ್ ಟ್ರಾನ್ಸ್ ಫಾರಂ ಕೊಡುತ್ತಿದ್ದೀರಿ. 2013ರಲ್ಲಿ ಹಣ ಕಟ್ಟಿದವರಿಗೆ ಟಿಸಿ ಕೊಡದೇ, ಲಂಚ ಪಡೆದು ಬೇಕಾದವರಿಗೆ ಟಿಸಿ ಕೊಡುತ್ತಿದ್ದೀರಾ. ಟಿಸಿಗಳು ಕೆಟ್ಟು ಹೋದರೂ ಲಂಚ ಕೊಡದೆ ಅವುಗಳನ್ನು ಸರಿಪಡಿಸುವುದಿಲ್ಲ ಎಂದು ಆರೋಪಿಸಿದರು.

ನಿಜವಾದ ರೈತರು ಬದುಕುವುದು ಹೇಗೆ. ನೀವೆಲ್ಲ ನಾಲ್ಕು ಅಕ್ಷರ ಕಲಿತಿದ್ದೀರ ಎಂದು ದೇವಲೋಕದಿಂದ ಇಳಿದು ಬಂದ ರೀತಿ ಆಡಬಾರದು. ನೀವು ಇಂಜಿನಿಯರಿಂಗ್ ಓದಿ ಬಂದಿಲ್ಲ. ನಿಮ್ಮ ಹೆಂಡತಿಯರಿಗೆ ಸೀರೆ ಕೊಡಿಸಲು ಹಣ ಹೇಗೆ ಹೊಂದಿಸುವುದು ಎಂಬುದನ್ನು ಓದಿ ಬಂದಿದ್ದೀರ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ರೈತರ ಆಕ್ರೋಶಕ್ಕೆ ಬೆದರಿದ ಮೇಲಾಧಿಕಾರಿಗಳು ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗುವುದಿಲ್ಲ. ಲಂಚಬಾಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸೋದಾಗಿ ಹೇಳಿ ರೈತರನ್ನ ಸಮಾಧಾನ ಪಡಿಸಿದರು.

Comments

Leave a Reply

Your email address will not be published. Required fields are marked *