ಹಾವೇರಿಯಲ್ಲಿ ರೈತರಿಗೆ ಕಾರಹುಣ್ಣಿಮೆ ಬಳಿಕ ಬಂಡಿ ಓಟದ ಖುಷಿ

ಹಾವೇರಿ: ಕಾರಹುಣ್ಣಿಮೆ ಹಬ್ಬ ಅಂದ್ರೆ, ಉತ್ತರ ಕರ್ನಾಟಕ ಭಾಗದ ರೈತರಿಗೆ ಖುಷಿ. ಎಂಥಾ ಕಷ್ಟಕಾಲ, ಬರಗಾಲ ಬಂದ್ರೂ ಸಹ ರೈತರು ಈ ಹಬ್ಬವನ್ನ ಮಾತ್ರ ಮರೆಯೋದಿಲ್ಲ. ಅದ್ರಲ್ಲೂ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಬಂಡಿ ಓಟವನ್ನ ನಡೆಸ್ತಾರೆ.

ಎರಡು ದಿನಗಳ ಕಾಲ ಬಂಡಿಗಳನ್ನ ಓಡಿಸಿ ಕಾರಹುಣ್ಣಿಮೆ ಸಂಭ್ರಮ ಆಚರಿಸ್ತಾರೆ. ಒಂಬತ್ತು ದಿನಗಳ ಉಪವಾಸ ವೃತ ಮಾಡುವ ವೀರಗಾರರು ರೈತರ ಬದಲಾಗಿ ಬಂಡಿಗಳನ್ನ ಓಡಿಸೋದು ಇಲ್ಲಿನ ವಿಶೇಷ. ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬದ ನಂತರ ಎತ್ತಿನ ಬಂಡಿ ಓಡಿಸಿ ಕರಿಹರಿಯೋ ಹಬ್ಬ ಆಚರಿಸ್ತಾರೆ.

ಗ್ರಾಮದ ಭರಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎರಡು ದಿನಗಳ ಕಾಲ ಬಂಡಿಗಳನ್ನ ಓಡಿಸಲಾಗುತ್ತೆ. ಬಂಡಿಗಳನ್ನ ಓಡಿಸೋಕೆ ರೈತರ ಬದಲಾಗಿ ವೀರಗಾರ ಮನೆತನದವರು ತಯಾರಾಗಿರ್ತಾರೆ. ಕಾರಹುಣ್ಣಿಮೆ ಬಂಡಿ ಓಟದ ಮುಂಚಿನ ಒಂಬತ್ತು ದಿನಗಳ ಕಾಲ ಬಂಡಿ ಓಡಿಸೋ ವೀರಗಾರರು ಕಠಿಣ ಉಪವಾಸ ವೃತವನ್ನ ಕೈಗೊಳ್ತಾರೆ. ಕಠಿಣ ಉಪವಾಸ ಕೈಗೊಳ್ಳುವ ವೀರಗಾರರು ಕಾರಹುಣ್ಣಿಮೆಯ ಎರಡು ದಿನಗಳ ನಂತರ ಬಂಡಿ ಓಟಕ್ಕೆ ಅಣಿಯಾಗ್ತಾರೆ. ಅಲಂಕಾರಗೊಂಡಿರೋ ಬಂಡಿಯಲ್ಲಿ ಕೂತು ಬಂಡಿಯನ್ನ ಓಡಿಸಿ ಸಂಭ್ರಮಿಸ್ತಾರೆ.

ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಬಂಡಿ ಓಡಿಸೋದು ನಡೆದುಕೊಂಡು ಬಂದಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಆರಂಭವಾಗುವ ಪೂರ್ವದಲ್ಲಿ ರೈತರು ತಮ್ಮ ಸಂಗಾತಿಗಳಾದ ಎತ್ತುಗಳಿಗೆ ಖುಷಿ ಪಡಿಸೋಕೆ ಅಂತಾ ಬಂಡಿ ಓಟ ಮಾಡ್ತಾರೆ. ಎರಡು ದಿನಗಳ ಕಾಲ ನಡೆಯೋ ಬಂಡಿ ಓಟವನ್ನ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರ ದಂಡೇ ಗ್ರಾಮಕ್ಕೆ ಆಗಮಿಸುತ್ತೆ. ಯಾವುದೇ ಜಾತಿ ಬೇಧವೆನಿಸದೆ ಎಲ್ಲ ಜನಾಂಗದ ಜನರೂ ಸಹ ಒಂದಾಗಿ ಭಾವೈಕ್ಯತೆಯಿಂದ ಬಂಡಿ ಉತ್ಸವ ನಡೆಸಿಕೊಂಡು ಬರ್ತಿದ್ದಾರೆ. ತಂಡೋಪತಂಡವಾಗಿ ಬಂಡಿ ಉತ್ಸವ ನೋಡಲು ಬರೋ ಜನರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಂಡಿ ಉತ್ಸವವನ್ನ ಕಣ್ತುಂಬಿಕೊಂಡು ಮನೆಗೆ ವಾಪಸ್ಸಾಗ್ತಾರೆ. ಜನರು ಯಾವುದೇ ರೀತಿಯ ಅಂಜಿಕೆ ಅಳುಕಿಲ್ಲದೇ ಬಂಡಿ ಓಟ ನೋಡಿ ಸಂಭ್ರಮಿಸ್ತಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕರ್ಜಗಿ ಬಂಡಿ ಉತ್ಸವಕ್ಕೆ ವಿಶೇಷವಾದ ಪ್ರಾಧಾನ್ಯತೆ ಇದೆ. ಕರ್ಜಗಿ ಬಂಡಿ ಉತ್ಸವ ನೋಡಲು ಜಿಲ್ಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಾರೆ. ರೈತರಂತೂ ಫುಲ್ ಖುಷಿ ಖುಷಿಯಿಂದಲೇ ಬಂಡಿ ಉತ್ಸವದಲ್ಲಿ ಪಾಲ್ಗೊಂಡು ಕಾರಹುಣ್ಣಿಮೆ ಸಂಭ್ರಮ ಆಚರಿಸ್ತಾರೆ.

Comments

Leave a Reply

Your email address will not be published. Required fields are marked *