ಅಧಿಕಾರಿಗಳ ನಿರ್ಲಕ್ಷ್ಯ: 8 ದಿನಗಳಿಂದ ತೊಗರಿ ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ ಯಾದಗಿರಿ ರೈತರು

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 8 ದಿನಗಳಿಂದ ತೊಗರಿ ಕೇಂದ್ರ ಬಂದ್ ಆದ ಪರಿಣಾಮ ರೈತರು ತಾವು ಕಷ್ಟದಿಂದ ಬೆಳೆದ ತೊಗರಿಯನ್ನು ಮಾರಾಟ ಮಾಡಲು ಕಷ್ಟಪಡುತ್ತಿದ್ದಾರೆ.

ಕಳೆದ 8 ದಿನಗಳಿಂದ ರೈತರು ಸಾವಿರಾರು ಕ್ವಿಂಟಲ್ ತೊಗರಿ ಧಾನ್ಯಗಳನ್ನು ವಾಹನದಲ್ಲಿ ಹಾಕಿಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಿದ್ದಾರೆ. ಆದರೆ ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿಸುವರು ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತದ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ವಿಂಟಲ್ ತೊಗರಿಗೆ 5500 ರೂಪಾಯಿಯ ಬೆಂಬಲ ಬೆಲೆಯೊಂದಿಗೆ ತೊಗರಿ ಖರೀದಿಸುತ್ತಿದೆ. ಕೇಂದ್ರ ಸರಕಾರದ ಭಾರತೀಯ ಆಹಾರ ನಿಗಮವು ತೊಗರಿ ಖರೀದಿ ಕೇಂದ್ರ ತೆಗೆದು ತೊಗರಿ ಖರೀದಿ ಮಾಡಲಾಗುತ್ತಿತ್ತು.

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಹೊರಭಾಗದ ಹಸನಾಪುರನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಳೆದ 8 ದಿನಗಳಿಂದ ತೊಗರಿ ಖರೀದಿ ಕೇಂದ್ರಕ್ಕೆ ಅಧಿಕಾರಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ. ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಖರೀದಿ ಮಾಡದೇ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಈ ಹಿಂದೆ ಕೂಡ ಸಮರ್ಪಕವಾಗಿ ತೊಗರಿ ಖರೀದಿ ಮಾಡಿಲ್ಲ. ಈಗ ಮತ್ತೆ ರೈತರಿಂದ ತೊಗರಿ ಖರೀದಿ ಮಾಡಲು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ.

ತೊಗರಿ ಖರೀದಿ ಕೇಂದ್ರ ಸ್ಥಗಿತ ಹಿನ್ನೆಲೆಯಲ್ಲಿ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ಬಿಸಿಲಿನ ತಾಪವೂ ಹೆಚ್ಚಾಗಿದ್ದು ರೈತರು ತಾವು ಬೆಳೆದ ತೊಗರಿಯನ್ನು ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಇನ್ನು ಕೆಲ ರೈತರು ಸಾಗಾಟ ವೆಚ್ಚಕ್ಕೆ ಹೆದರಿ ಎಪಿಎಂಸಿಯಲ್ಲಿ ಕುಳಿತಿದ್ದಾರೆ. ಹಗಲು ರಾತ್ರಿಯನ್ನದೇ ತೊಗರಿ ಯಾರಾದ್ರು ಕಳ್ಳತನ ಮಾಡಬಹುದೆಂದು ತಾವು ಮಾರಾಟಕ್ಕೆ ತಂದಿದ್ದ ಧಾನ್ಯಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಸರಿಯಾಗಿ ಊಟ ನಿದ್ದೆ ಇಲ್ಲದೇ ರೈತರು ತೊಗರಿ ಖರೀದಿ ಕೇಂದ್ರದ ಬಾಗಿಲು ಯಾವಾಗ ತೆಗೆಯುತ್ತೆ ಎಂದು ಕಾಯುತ್ತಿದ್ದಾರೆ. ಇನ್ನು ಮುಂದಾದ್ರು ಈ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಜರುಗಿಸುವ ಮೂಲಕ ರೈತರ ನೆರವಿಗೆ ಬರಬೇಕಿದೆ.

 

Comments

Leave a Reply

Your email address will not be published. Required fields are marked *