ರೈತ ನಾಯಕ ರಾಕೇಶ್ ಟಿಕಾಯತ್‍ಗೆ ಕೊಲೆ ಬೆದರಿಕೆ

ಲಕ್ನೋ: ಅಪರಿಚಿತ ವ್ಯಕ್ತಿಗಳಿಂದ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

ಟಿಕಾಯತ್ ಅವರ ಕಾರು ಚಾಲಕ ಪ್ರಜ್ವಲ್ ತ್ಯಾಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ಅಧೀಕಾರಿ ಅಭಿಷೇಕ್ ಯಾದವ್ ಹೇಳಿದ್ದಾರೆ.

ಹಿರಿಯ ಸಬ್ ಇನ್ಸ್‌ಪೆಕ್ಟರ್‌ ರಾಕೇಶ್ ಶರ್ಮಾ ನೇತೃತ್ವದ ಪೊಲೀಸ್ ತಂಡವು ಟಿಕಾಯತ್ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕೆಲವು ಮಾಹಿತಿ ಕಲೆ ಹಾಕಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಕೃಷಿ ಕಾಯ್ದೆಯ ವಿರುದ್ಧ ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಭಾರತ್ ಕಿಸಾನ್ ಯೂನಿಯನ್ ಸಂಘಟನೆಯ ನಾಯಕನಾಗಿ  ರಾಕೇಶ್ ಟಿಕಾಯತ್ ಗುರುತಿಸಿಕೊಂಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಮುಜಾಫರನಗರದ ಸಿಸಾವುಲಿ ಪಟ್ಟಣದಲ್ಲಿ ಹುಟ್ಟಿದ ರಾಕೇಶ್ ಟಿಕಾಯತ್, ರೈತ ಹೋರಾಟ ಕುಟುಂಬದ ಕುಡಿಯಾಗಿದ್ದಾರೆ. ಬಿಕೆಯು ಸಹ ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನಾಗಿ ಜನಿಸಿ ಇದೀಗ ಬಿಕೆಯು ವಕ್ತಾರರಾಗಿ ರೈತ ಹೋರಾಟವನ್ನು ಮಾಡುತ್ತಿದ್ದರೆ, ಇವರ ಹಿರಿಯಣ್ಣ ನರೇಶ್ ಟಿಕಾಯತ್ ಬಿಕೆಯುನ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.  ರಾಕೇಶ್ ಟಿಕಾಯತ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

ಮೀರತ್ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು 1992 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡಿ ನಂತರ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ವೃತ್ತಿ ತೊರೆದು ಬಿಕೆಯು ಸಂಘಟನೆಯಲ್ಲಿ ತೊಡಗಿಕೊಂಡು 2018ರಿಂದ ವಕ್ತಾರರಾಗಿ ರೈತರ ಪರ ಕೆಲಸ ಮಾಡುತ್ತಿದ್ದರು. ಈ ಹಿಂದೆ ಹರಿದ್ವಾರ, ಉತ್ತರಾಖಂಡ್, ದೆಹಲಿ ಕಿಸಾನ್ ಕ್ರಾಂತಿಯಾತ್ರೆಯಾ ನಾಯಕರಾಗಿ ಗುರುತಿಸಿಕೊಂಡಿದ್ದ ಟಿಕಾಯತ್, 2007ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಖತಾವುಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆರ್‍ ಜೆ ಡಿ  ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಆಕಾಡಕ್ಕೆ ಇಳಿದಿದ್ದರು. ಇದನ್ನೂ ಓದಿ: ಭರವಸೆಗಳನ್ನು ಉಲ್ಲಂಘಿಸಿದ ಮೋದಿ ಸರ್ಕಾರ- ಮಾ.21ರಿಂದ ರೈತರಿಂದ ಮತ್ತೆ ಸರಣಿ ಪ್ರತಿಭಟನೆ

Comments

Leave a Reply

Your email address will not be published. Required fields are marked *