ಬ್ಯಾಂಕ್ ಎದುರೇ ಪತ್ನಿ, ಮಗ, 3 ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಮೈಸೂರು: ಬ್ಯಾಂಕ್ ಅಧಿಕಾರಿಗಳ ನೊಟೀಸ್ ಗೆ ಹೆದರಿ ರೈತ ಕುಟುಂಬವೊಂದು ವಿಷ ಸೇವಿಸಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಹಾಡ್ಯ ಗ್ರಾಮದ ರೈತ ಶಿವಣ್ಣ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ ನಡೆದಿದೆ. ಮೂರು ಹೆಣ್ಣುಮಕ್ಕಳು, ಪತ್ನಿ ಹಾಗೂ ಮಗನ ಜೊತೆ ಬ್ಯಾಂಕಿನ ಮುಂಭಾಗದಲ್ಲಿ ವಿಷ ಕುಡಿಯಲು ಮುಂದಾಗಿದ್ದ ಶಿವಣ್ಣ ಅವರನ್ನು ಮನವೊಲಿಸುವಲ್ಲಿ ರೈತ ಮುಖಂಡರು ಯಶಸ್ವಿಯಾಗಿದ್ದಾರೆ.

2011 ರಲ್ಲಿ ಶಿವಣ್ಣ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೀನಿನ ಪತ್ರಗಳನ್ನು ಅಡವಿಟ್ಟು ಟ್ರ್ಯಾಕ್ಟರ್ ಖರೀದಿಗಾಗಿ 7 ಲಕ್ಷ ರೂ. ಸಾಲ ಪಡೆದಿದ್ದರು. ಅಲ್ಪ-ಸ್ವಲ್ಪ ಸಾಲ ತೀರಿಸಿದ ಶಿವಣ್ಣ ಪೂರ್ತಿ ಹಣ ಮರುಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ಏಕಾಏಕಿ ಕ್ರಮ ತೆಗೆದುಕೊಳ್ಳಲು ಮುಂದಾಗಿ, ನೋಟಿಸ್ ನೀಡದೆ ಟಾಂಟಾಂ ಹೊಡೆಸುವುದಾಗಿ ಬೆದರಿಕೆ ಹಾಕಿದ್ದರು.

ಗೌರವಕ್ಕೆ ಅಂಜಿದ ಶಿವಣ್ಣ, ಕುಟುಂಬ ಸಮೇತ ನಂಜನಗೂಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂದೆ ವಿಷ ಸೇವಿಸಲು ಬಾಟಲಿ ಸಮೇತ ಹಾಜರಾಗಿದ್ದರು. ಈ ವೇಳೆ ಬ್ಯಾಂಕಿಗೆ ಧಾವಿಸಿದ ರೈತ ಮುಖಂಡರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಶಿವಣ್ಣ ಕುಟುಂಬದ ನೆರವಿಗೆ ನಿಂತಿದ್ದಾರೆ.

Comments

Leave a Reply

Your email address will not be published. Required fields are marked *