ನಕ್ಸಲ್ ಮಾಹಿತಿದಾರ ಎಂದು ಶಂಕಿಸಿ ಪೊಲೀಸರಿಂದ ಎಫ್‍ಐಆರ್ -ಮನನೊಂದ ರೈತ ಆತ್ಮಹತ್ಯೆ

ಚಿಕ್ಕಮಗಳೂರು: ನಕ್ಸಲರ ಮಾಹಿತಿದಾರ ಎಂದು ಶಂಕಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

62 ವರ್ಷದ ಮಾತೊಳ್ಳಿ ಸತೀಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಶೃಂಗೇರಿಯ ನಕ್ಸಲ್ ಪೀಡಿತ ಪ್ರದೇಶದ ನಿವಾಸಿಯಾಗಿದ್ದರು. ಈ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್ ಪರ ಘೋಷಣೆಗಳನ್ನು ಹೊಂದಿರುವ ಕರಪತ್ರಗಳು ಪತ್ತೆಯಾಗಿದ್ದವು.

ಸತೀಶ್ ನಕ್ಸಲರಿಗೆ ಮಾಹಿತಿ ನೀಡಿವ ವ್ಯಕ್ತಿ ಎಂದು ಶಂಕಿಸಿ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಸತೀಶ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಅಲ್ಲದೇ ಹಲವು ಬಾರಿ ಅವರನ್ನ ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದರು ಎಂದು ಸ್ಥಳೀಯ ರೈತ ಮುಖಂಡರು ಆರೋಪಿಸಿದ್ದಾರೆ.

ಪೊಲೀಸರ ಕಿರುಕುಳದಿಂದ ಬೇಸತ್ತ ಸತೀಶ್ ಕಳೆದ ಎರಡು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದರು. ಆದರೆ ಗುರುವಾರ ಸಂಜೆ ಮನೆಗೆ ಆಗಮಿಸಿದ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸತೀಶ್ ಅವರ ಆತ್ಮಹತ್ಯೆಗೆ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ಕಾರಣವೆಂದು ಶೃಂಗೇರಿ ರೈತ ಮುಖಂಡರು ಹಾಗೂ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ. ಅಲ್ಲದೇ ಶೃಂಗೇರಿಯ ಸರ್ಕಲ್ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ.

ಈ ಕುರಿತು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗೃಹಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.

Comments

Leave a Reply

Your email address will not be published. Required fields are marked *