ಬೆಂಗಳೂರು: ಒಂದೆಡೆ ಸ್ಯಾಂಡಲ್ ವುಡ್‍ನಲ್ಲಿ ‘ಬಾಸ್’ಗಾಗಿ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಇನ್ನೊಂದೆಡೆ ಸ್ಟಾರ್ ಗಳೇ ಖುದ್ದು ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಮೊನ್ನೆ ತಾನೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಅವರವರ ಮನೆಗೆ ಅವರವರು ಬಾಸು, ಅವರವರ ಅಭಿಮಾನಿಗಳಿಗೆ ಅವರವರೇ ಬಾಸು, ಎಲ್ಲರಿಗೂ ಇದ್ದಾನೆ ಮೇಲೊಬ್ಬ ಬಿಗ್ ಬಾಸು’ ಅಂತಾ ಹೇಳಿದ್ದರು.

ಯಾರು ಏನೇ ಹೇಳಿದರೂ ದರ್ಶನ್ ಅಭಿಮಾನಿಗಳು ಮಾತ್ರ ‘ಬಾಸ್’ ಪಟ್ಟವನ್ನು ಬೇರೊಬ್ಬರಿಗೆ ಬಿಟ್ಟುಕೊಡುವ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಚಾನೆಲ್ಲುಗಳಲ್ಲಿ ಪ್ಯಾನಲ್ ಡಿಸ್ಕಷನ್ನುಗಳೂ ನಡೆಯುತ್ತಲೇ ಇವೆ. ಇವೆಲ್ಲದರ ನಡುವೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಖುದ್ದು ದರ್ಶನ್ ಅವರ ಮನೆಯ ಮುಂದೆ ಇಂದು ಹೂವಿನಲ್ಲಿ ‘ಒನ್ ಅಂಡ್ ಓನ್ಲಿ ಬಾಸ್ ಆಫ್ ಸ್ಯಾಂಡಲ್‍ವುಡ್. ಚಾಲೆಂಜಿಂಗ್ ಸ್ಟಾರ್ ದರ್ಶನ್’ ಎಂದು ಬರೆದಿದ್ದಾರೆ. ಇದರ ಫೋಟೋಗಳನ್ನು ದರ್ಶನ್ ಅಭಿಮಾನಿಗಳ ಅಫಿಷಿಯಲ್ ಫ್ಯಾನ್ಸ್ ಪೇಜ್ ಡಿ ಕಂಪನಿ ಪೋಸ್ಟ್ ಕೂಡಾ ಮಾಡಿದೆ.
ದರ್ಶನ್ ಅವರ ಕುರಿತಾದ ಕರಾರುವಕ್ಕು ವಿಚಾರಗಳು, ನಿರ್ಧಾರಿತ ನಿರ್ಣಯಗಳನ್ನು ಮಾತ್ರ ಡಿ ಕಂಪೆನಿ ಪ್ರಕಟಿಸುತ್ತದೆ. ಈ ದೃಷ್ಟಿಯಿಂದ ನೋಡಿದರೆ ದರ್ಶನ್ ಅವರ ಪರಮಾಪ್ತರು ‘ಬಾಸ್’ ಪಟ್ಟವನ್ನು ಅಧಿಕೃತವಾಗಿಯೇ ಉಳಿಸಿಕೊಂಡಿದ್ದಾರೇನೋ ಎನಿಸುತ್ತಿದೆ.


Leave a Reply