‘ಈ ಸಲ ಕಪ್ ನಮ್ದೆ’- ಮಾದಪ್ಪನ ಮೊರೆ ಹೋದ ಆರ್‌ಸಿಬಿ ಅಭಿಮಾನಿ

ಚಾಮರಾಜನಗರ: ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾದ್ರೆ ಸಾಕು ‘ಈ ಸಲ ಕಪ್ ನಮ್ದೆ’ ಎನ್ನುವ ಡೈಲಾಗ್ ಸಖತ್ ಸದ್ದು ಮಾಡುತ್ತದೆ. ಅದರಲ್ಲೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ದೇವರಿಗೆ ಹರಗೆ ಕಟ್ಟುವುದು, ಪೂಜೆ ಸಲ್ಲಿಸಿವುದನ್ನು ಮಾಡುತ್ತಾರೆ. ಅದರಂತೆ ಆರ್‌ಸಿಬಿ ಅಭಿಮಾನಿಯೊಬ್ಬರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾರೆ.

ಆರ್‌ಸಿಬಿ ಅಭಿಮಾನಿ ಮಲೆಮಹದೇಶ್ವರನಿಗೆ ಬೇಡಿಕೆ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 24ರಂದು ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು, ಈ ಬಾರಿಯಾದರೂ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ. ಇದನ್ನೂ ಓದಿ:  ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?

ರಘು ಅವರು ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ನೇತೃತ್ವದ ಪಡೆಯನ್ನು ಹುರಿದುಂಬಿಸಲು ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಇದನ್ನೂ ಓದಿ: ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

ಸತತ ಸೋಲಿನಿಂದ ಕಂಗೆಟ್ಟಿದ್ದರೂ ಆರ್‌ಸಿಬಿಗೆ ಅಭಿಮಾನಿ ಬಳಗವೇನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಈ ಸಲ ಕಪ್ ನಮ್ದೆ’ ಎಂಬ ಅಭಿಮಾನಿಗಳ ಉದ್ಘಾರ ಈ ಬಾರಿ ಮಲೆಮಹದೇಶ್ವರನಿಗೂ ತಲುಪಿರುವುದು ವಿಶೇಷ.

ಗೆಲ್ಲದ ತಂಡಗಳು:
ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.

Comments

Leave a Reply

Your email address will not be published. Required fields are marked *