ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರು (Kadur) ತಾಲೂಕಿನ ಮಾಜಿ ಶಾಸಕ ಹಾಗೂ ದತ್ತ ಮೇಷ್ಟ್ರು ಎಂದೇ ಖ್ಯಾತಿಯಾಗಿರುವ ವೈ.ಎಸ್.ವಿ. ದತ್ತ (YSV Datta) ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂ. ಹಣ ನೀಡಿ ಶುಭ ಕೋರಿದ್ದಾರೆ.

ಕಳೆದ 50 ವರ್ಷಗಳಿಂದ ಜೆಡಿಎಸ್‌ನ ಕಟ್ಟಾಳಾಗಿದ್ದ ವೈ.ಎಸ್.ವಿ.ದತ್ತ, ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರನಂತೆಯೇ ಇದ್ದರು. ಆದರೆ, ಕಳೆದ 2 ತಿಂಗಳ ಹಿಂದೆ ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಕಡೂರಿನ ಕಾಂಗ್ರೆಸ್ (Congress) ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ, ಕಡೂರು ತಾಲೂಕಿನ ಗಿರಿಯಾಪುರ ಮೂಲದ ವ್ಯಕ್ತಿಯೊಬ್ಬರು 101 ರೂಪಾಯಿ ದಾನ ನೀಡಿ ಚುನಾವಣೆಗೆ ಶುಭ ಕೋರಿದ್ದಾರೆ.

ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತದ್ದು. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವಕ್ಕೆ ಜನ ನಿಮ್ಮ ಜೊತೆಗಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸುವ ಹೊಸ ಜವಾಬ್ದಾರಿ ಇದೆ. ಅದನ್ನು ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ: ಸೋಮಣ್ಣ

ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳನ್ನು ನಿಮಗೆ ನೀಡುತ್ತೇವೆ.‌ ಸಮಾನ ಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದು, 101 ರೂಪಾಯಿ ಹಣ ನೀಡಿ ವೈ.ಎಸ್.ವಿ. ದತ್ತ ಅವರಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು

Comments

Leave a Reply

Your email address will not be published. Required fields are marked *