ಅಗರ್ತಲಾ: ಹಸಿವು, ಬಡತನದ ಬೇಗುದಿ ತಾಳಲಾರದೇ ಕುಟುಂಬವೊಂದು ಕೇವಲ 200 ರೂಪಾಯಿಗೆ ತಮ್ಮ 8 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ಮನಕಲಕುವ ಘಟನೆ ತ್ರಿಪುರ ದ ಪೆಲಿಯಾಮೋರಾ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದು, ರಾಜ್ಯ ಆಡಳಿತ ಈ ಬಗ್ಗೆ ಮಾಹಿತಿ ಪಡೆಯಲು ಗ್ರಾಮಕ್ಕೆ ಅಧಿಕಾರಿಗಳ ತಂಡವನ್ನ ಕಳಿಸಿದೆ. ಹಸಿವಿನಿಂದ ಬಳಲಿ 8 ತಿಂಗಳ ಹೆಣ್ಣುಮಗುವನ್ನ ಮಾರಿಕೊಂಡ ಈ ಬುಡಕಟ್ಟು ಕುಟುಂಬಕ್ಕೆ ಸ್ಥಳೀಯ ಅಧಿಕಾರಿಗಳು ಊಟ ಹಾಗೂ ಬಟ್ಟೆಯನ್ನ ನೀಡಿದ್ದಾರೆ. ಮುಂದೆ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ. ಹಸುಗೂಸನ್ನು ಕುಟುಂಬಕ್ಕೆ ಹಿಂದಿರುಗಿಸಲಾಗಿದೆ.
ನವಜಾತ ಶಿಶುವನ್ನ ಹೊರತುಪಡಿಸಿ ತಂದೆಗೆ ಈಗಾಗಲೇ 4 ಮಕ್ಕಳಿದ್ದರು. ಹಸಿವು ಹಾಗೂ ಬಡತನ ತಾಳಲಾರದೆ ಮಗಳನ್ನ ಮಾರಾಟ ಮಾಡಬೇಕಾಯಿತು ಎಂದು ಅವರು ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೆ ಬಡವರಿಗಾಗಿ ಇರುವ ಸರ್ಕಾರಿ ಯೋಜನೆಗಳು ತನ್ನ ಗ್ರಾಮವನ್ನ ತಲುಪಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಖೋವೈನ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಿಎಸ್ ಮಹಾತಮೇ, ಗ್ರಾಮದಲ್ಲಿರುವ ನಮ್ಮ ತಂಡ ಇದ್ದು, ಬುಡಕಟ್ಟು ಕುಟುಂಬಕ್ಕೆ ಅಗತ್ಯ ನೆರವು ಒದಗಿಸುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ಹಸಿವಿನಿಂದ ಬಳಲಿರೋ ಈ ಕುಟುಂಬದವರ ಹೆಸರು ಬಿಪಿಎಲ್ ಪಟ್ಟಿಯಲ್ಲಿ ಯಾಕಿಲ್ಲ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಿರೋಧ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

ಇದೊಂದು ನಾಚಿಗೆಗೇಡಿನ ಸಂಗತಿ. ಸರ್ಕಾರ ಬಡವರಿಗಾಗಿ ಏನೂ ಮಾಡಿಲ್ಲ. ಹೀಗಾಗಿ ಅವರು ಮಕ್ಕಳನ್ನ ಮಾರಾಟ ಮಾಡ್ತಿರೋದನ್ನ ನೋಡ್ತಿದ್ದೀರ. ಸ್ಥಳೀಯ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ರಿಪುರಾದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ಮೇ ನಲ್ಲಿ ಮಹಿಳೆಯೊಬ್ಬರು 200 ರೂ. ಗಾಗಿ ಮಗುವನ್ನ ಆಟೋ ಚಾಲಕನಿಗೆ ಮಾರಿದ್ದರು ಎಂದು ತ್ರಿಪುರಾ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದಾಸ್ ಹೇಳಿದ್ದಾರೆ.

Leave a Reply