ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನೊಂದ ಕುಟುಂಬ!

ರಾಯಚೂರು: ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಗೀತಾ ಸಿಂಗ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೀತಾ ಸಿಂಗ್ ರವರು ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ಮಾಚಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಗೀತಾ ಸಿಂಗ್‍ರ ಪತಿ ರಾಜೇಶ್ ಸಿಂಗ್ ವಿಚ್ಛೇದನದ ನಂತರವೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಆತನ ಕುಟುಂಬ ಹಾಗೂ ಮಹಿಳೆಯ ಕುಟುಂಬದ ಸದಸ್ಯರು ಸಹ ಕಿರುಕುಳ ನೀಡಿ, ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ಬೆದರಿಕೆಯನ್ನು ಹಾಕಿದ್ದರು.

ಇದರಿಂದ ನೊಂದ ಮಹಿಳೆಯು ರಕ್ಷಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಆದರೆ ಗೀತಾರ ಮನವಿಗೆ ಯಾವೊಬ್ಬ ಅಧಿಕಾರಿಯು ಸ್ಪಂದಿಸಿರಲಿಲ್ಲ. ಅಲ್ಲದೇ ಮಹಿಳಾ ಠಾಣೆಯಲ್ಲಿ ದೂರು ನೀಡಲು ಹೋದರೂ, ದೂರು ಸ್ವೀಕರಿಸಿಲ್ಲ. ಇದರಿಂದ ನೊಂದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಗೀತಾ ಸಿಂಗ್ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆ ತಿಳಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *