ಜೀವನದಲ್ಲಿ ಸೋತಿದ್ದೇನೆ- ಅಪ್ಪ, ಅಮ್ಮ, ಮಗ, ಪತ್ನಿಗೆ ಶೂಟ್ ಮಾಡಿ ತಾನೂ ಆತ್ಮಹತ್ಯೆ ಮಾಡ್ಕೊಂಡ

ಚಾಮರಾಜನಗರ: ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತರಾದವರನ್ನು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿರುವ ಓಂ ಪ್ರಕಾಶ್, ಪತ್ನಿ ನಿಖಿತ, ಮಗ ಆರ್ಯ ಕೃಷ್ಣ, ತಾಯಿ ಹೇಮಲತ, ತಂದೆ ನಾಗರಾಜು ಭಟ್ಟಚಾರ್ಯ ಎಂದು ಗುರುತಿಸಲಾಗಿದೆ. ಸದ್ಯ ಈಗ ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಈ ಐವರೂ ಪ್ರೊ. ಮಹೇಶ್ ಚಂದ್ರಗುರು ಅವರಿಗೆ ಸೇರಿದ್ದ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಚಂದ್ರ ಗುರು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಓಂ ಪ್ರಕಾಶ್ ಹಾಗೂ ಅವರ ಕುಟುಂಬಸ್ಥರು ಮೂರು ದಿನಗಳ ಹಿಂದೆ ಗುಂಡ್ಲುಪೇಟೆಗೆ ಆಗಮಿಸಿ, ಎಲಚೆಟ್ಟಿ ಗ್ರಾಮದ ಸ್ನೇಹಿತನ ಫಾರ್ಮ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು. ಬಳಿಕ ಗುರುವಾರ ರಾತ್ರಿ ಗುಂಡ್ಲುಪೇಟೆ ನಂದಿ ಲಾಡ್ಜ್‍ನಲ್ಲಿ ರೂಂ ಬುಕ್ ಮಾಡಿದ್ದರು. ಓಂ ಪ್ರಕಾಶ್ ಜೊತೆಯಲ್ಲಿ ಬಂದಿದ್ದ ಚೇತನ್, ಸುರೇಶ್ ಎಂಬವರನ್ನು ವಾಪಸ್ ಮೈಸೂರಿಗೆ ಕಳುಹಿಸಿದ್ದರು.

ಬಳಿಕ ಓಂ ಪ್ರಕಾಶ್ ಮಧ್ಯರಾತ್ರಿ ಸ್ನೇಹಿತರಿಗೆ ಕರೆ ಮಾಡಿ, ನಾನು ಜೀವನದಲ್ಲಿ ಸೋತಿದ್ದೇನೆ. ನಾನು ಯಾರನ್ನು ನಂಬಿದ್ದೇನೋ ಅವರೇ ನನಗೆ ಕೈ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಗುಂಡ್ಲುಪೇಟೆ ಬಳಿ ಕಾರು ನಿಲ್ಲಿಸಿದ್ದೇವೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಓಂ ಪ್ರಕಾಶ್ ಡಾಟಾ ಬೇಸ್ ಕಂಪನಿ ಹಾಗೂ ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ಡಾಟಾ ಬೇಸ್ ಕಂಪನಿಯಿಂದ ಓಂ ಪ್ರಕಾಶ್ ಅವರಿಗೆ ಕೋಟ್ಯಂತರ ರೂ. ಲಾಸ್ ಆಗಿತ್ತು. ಬಳಿಕ ಅವರು ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ಮೂಲತಃ ತುಮಕೂರಿನವರಾಗಿರುವ ಓಂ ಪ್ರಕಾಶ್ ಅವರು ಮೈಸೂರಿನ ದಟ್ಟಗಳ್ಳಿ ಬಡಾವಣೆಯ ಜೋಡಿಬೇವಿನ ಮರದ ಬಳಿ ಇರುವ ಮನೆಯಲ್ಲಿ ವಾಸಿಸುತ್ತಿದ್ದರು.

ಸಾಮೂಹಿಕ ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಭೇಟಿ ನೀಡಿದ್ದಾರೆ. ಅಲ್ಲದೆ ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿಯುತ್ತದಂತೆ ಓಂ ಪ್ರಕಾಶ್ ಸಹೋದರಿ ಸೇರಿದಂತೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Comments

Leave a Reply

Your email address will not be published. Required fields are marked *