ಗೋಮೂತ್ರದಿಂದ ಬದುಕು ಕಟ್ಟಿಕೊಂಡು ಕುಟುಂಬ

– ತಿಂಗಳಿಗೆ ಗಂಜಲದಿಂದ 40 ಸಾವಿರ ಸಂಪಾದನೆ
– 18 ವರ್ಷದಿಂದ 23 ಜಾನುವಾರುಗಳ ಲಾಲನೆ ಪೋಷಣೆ

ಮಡಿಕೇರಿ: ಗೋ ಮೂತ್ರ, ಗಂಜಲ ಇದನ್ನ ನೋಡಿದರೆ ಈಗಿನ ಕಾಲದ ಹೆಚ್ಚಿನ ಮಂದಿ ಅಸಡ್ಡೆ ತೋರಿಸುತ್ತಾರೆ. ಆದರೆ ಗೋ ಮೂತ್ರದಿಂದಲೂ ಬದುಕು ಕಟ್ಟಿಕೊಳ್ಳಬಹುದು, ಗಂಜಲದಿಂದಲೂ ಆದಾಯ ಗಳಿಸಬಹುದು ಎಂದು ಕುಟುಂಬವೊಂದು ನಿರೂಪಿಸಿದೆ.

ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೊದೂರಿನ ದಿವಾಕರ್ ಭಟ್ ಕುಟುಂಬದವರು ಗೋಮೂತ್ರದಿಂದ ಬದುಕು ಕಟ್ಟಿಕೊಂಡಿದ್ದಾರೆ. ದನಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದಾಗ ಹಾಗೇ ಅಪ್ರಯೋಜಕವಾಗಿ ಕೆಳಗೆ ಬಿದ್ದು ಹೊರಹೋಗುವ, ಯಾರೂ ಕೇರ್ ಮಾಡದ ಗೋಮೂತ್ರವನ್ನ ಇವರ ಮನೆಯಲ್ಲಿ ವಿಶೇಷ ಆಸಕ್ತಿಯಿಂದ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಗಂಜಲವನ್ನ ಬಟ್ಟಿ ಇಳಿಸುವುದರ ಮೂಲಕ ಅರ್ಕಾ (ಪರಿಷ್ಕರಣೆ ಮಾಡಿದ ಗಂಜಲ) ಮಾಡಿ ಶೇಖರಣೆ ಮಾಡಲಾಗುತ್ತದೆ.

ಶೇಖರಣೆಯಾದ ಅರ್ಕಾವನ್ನ ಪ್ರತಿ ತಿಂಗಳು ಮಾರಾಟ ಮಾಡಲಾಗುತ್ತದೆ. ಯಾರಿಗೂ ಬೇಡವಾದ ಗೋಮೂತ್ರವನ್ನ ತುಂಬಾ ಜಾಣತನದಿಂದ ಜಾಗೃತೆ ವಹಿಸಿ ಸಂಗ್ರಹಿಸುತ್ತಾರೆ. ಈ ಮೂಲಕ ಗೋ ಮೂತ್ರಕ್ಕೂ ಡಿಮ್ಯಾಂಡ್ ಇದೆ ಅನ್ನೋದನ್ನ ಈ ಕುಟುಂಬ ನಿರೂಪಿಸಿದೆ. ಸದ್ಯ ಇವರ ಮನೆಯಲ್ಲಿ ಗುಜರಾತಿನ ಕಾಂಕ್ರೇಜ್ ದೇಶಿ ತಳಿಯ 23 ಜಾನುವಾರುಗಳಿದ್ದು, ಕಳೆದ 18 ವರ್ಷಗಳಿಂದ ಈ ದನಗಳನ್ನ ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

ದಿನಕ್ಕೆ ಏನಿಲ್ಲಾ ಅಂದರೂ ಕನಿಷ್ಠ 25 ಲೀಟರ್ ಅರ್ಕಾವನ್ನ ಶೇಖರಣೆ ಮಾಡಲಾಗುತ್ತದೆ. ಹೀಗೆ ಪರಿಶುದ್ಧ ಗಂಜಲವನ್ನ ರೆಡಿ ಮಾಡಲು ಸುಮಾರು 40 ಲೀಟರ್ ನಷ್ಟು ಗಂಜಲವನ್ನ ನಿರ್ದಿಷ್ಟ ಹಬೆ (ಶಾಕ)ಯನ್ನ ಕೊಟ್ಟು ಕುದಿಸಿದಾಗ 25 ಲೀಟರ್‌ನಷ್ಟು ಅರ್ಕಾ ತಯಾರಾಗುತ್ತದೆ. ಹೀಗೆ ತಿಂಗಳಿಗೆ ಏನಿಲ್ಲಾ ಅಂದರು ಅಂದಾಜು 600 ರಿಂದ 700 ಲೀಟರ್‌ನಷ್ಟು ಪರಿಶುದ್ಧ ಗಂಜಲ ಶೇಖರಣೆಯಾಗುತ್ತೆ. ಮಾರುಕಟ್ಟೆಯಲ್ಲಿ ಒಂದು ಲೀಟರ್‌ಗೆ ಕನಿಷ್ಠ 60ರೂ ಬೆಲೆಯಿದೆ. ಹೀಗಾಗಿ ತಿಂಗಳಿಗೆ ಸುಮಾರು 40 ಸಾವಿರ ಹಣವನ್ನ ಕೇವಲ ಗಂಜಲದಿಂದಲೇ ಗಳಿಸುತ್ತಾರೆ. ಆದ್ದರಿಂದ ನಾವುಗಳು ದನಗಳನ್ನ ಸಾಕಲ್ಲ, ನಮ್ಮನ್ನೇ ದನಗಳು ಸಾಕುತ್ತದೆ ಎಂದು ದಿವಾಕರ್ ಭಟ್ ಪುತ್ರ ಶಿವಶಂಕರ್ ಹೇಳಿದ್ದಾರೆ.

ಗೋಮೂತ್ರದ ಪ್ರಾಮುಖ್ಯತೆಯನ್ನ ಅರಿತ ಕೊಡಗಿನ ಈ ಕುಟುಂಬ ಎಲ್ಲೋ ಹರಿದು ಕಸದ ಗುಂಡಿ ಸೇರುತ್ತಿದ್ದ ಗಂಜಲದಿಂದಲೂ ಆದಾಯ ಗಳಿಸಬಹುದು ಅನ್ನೋದನ್ನ ಸಾಬೀತು ಮಾಡಿ ತೋರಿಸಿದ್ದಾರೆ.

Comments

Leave a Reply

Your email address will not be published. Required fields are marked *