ಎಲ್‍ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ನೀಡಲಾಗಿರೋ ಬಗ್ಗೆ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಮಾಹಿತಿ ಸಿಕ್ಕಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಆಪ್ತೆ ಶಶಿಕಲಾಗೆ ವಿಶೇಷ ಅಡುಗೆ ಕೋಣೆ ವ್ಯವಸ್ಥೆ ಇದೆ. ಇದಕ್ಕಾಗಿ 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ. ಛಾಪಾಕಾಗದ ಹಗರಣದ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಮಸಾಜ್ ಮಾಡಲು ಕೈಗೊಬ್ಬ, ಕಾಲಿಗೊಬ್ಬ ಕೈದಿಗಳಿದ್ದಾರೆ ಎಂದು ಜೈಲಿನ ಉಪನಿರೀಕ್ಷಕಿ ಡಿ. ರೂಪ ವರದಿಯಲ್ಲಿ ಹೇಳಿದ್ದರು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಆ ರೀತಿ ಏನಿಲ್ಲ. ಎಲ್ಲಾ ಕೈದಿಗಳು ಕೂಡ ಒಂದೇ ಅಂತ ಕಾರಾಗೃಹ ಮಹಾನಿರ್ದೇಶಕರಾದ ಸತ್ಯನಾರಾಯಣ್ ರಾವ್ ಹೇಳಿದ್ರು.

ರೂಪಾ ಅವರ ವರದಿಗೆ ಪುಷ್ಠಿ ನೀಡುವಂತೆ ವಿಡಿಯೋವೊಂದು ಇದೀಗ ಲಭ್ಯವಾಗಿದೆ. ಕೋಟಿ ಕೋಟಿ ರೂಪಾಯಿಯ ಛಾಪಾಕಾಗದ ವಂಚನೆ ಮಾಡಿ ಸಿಕ್ಕಿಬಿದ್ದ ಕರೀಂ ಲಾಲ್ ತೆಲಗಿ ಹಾಸಿಗೆ ಮೇಲೆ ಮಲಗಿರೋದನ್ನ ವಿಡಿಯೋದಲ್ಲಿ ಕಾಣಬಹುದು. ತೆಲಗಿಗೆ ಮಲಗೋಕೆ ಮಂಚ, ಮಂಚದ ಮೇಲೆ ಕುಷನ್ ಬೆಡ್ ವ್ಯವಸ್ಥೆ ಮಾಡಿಕೊಡಲಾಗಿದೆ. ಕುಡಿಯೋದಕ್ಕೆ ಮಿನರಲ್ ವಾಟರ್ ಕೂಡ ಇದೆ. ನೆಲಕ್ಕೆ ಸ್ಟಿಕರಿಂಗ್ ಕೂಡ ಮಾಡಿಕೊಟ್ಟಿದ್ದಾರೆ ಜೈಲಿನ ಅಧಿಕಾರಿಗಳು. ಇದಲ್ಲದೆ 51 ಇಂಚಿನ ಎಲ್‍ಇಡಿ ಟಿವಿ ತೆಲಗಿ ರೂಂನಲ್ಲಿದೆ.

ಸೆಕೆ ಆಯ್ತು ಅಂದ್ರೆ ಸೀಲಿಂಗ್ ಪ್ಯಾನ್ ಹಾಕಿಕೊಳ್ಳಬಹುದು. ಚಳಿಗಾಳಿ ಬರಬಾರ್ದು ಅಂತ ಸೆಲ್ಲರ್ ಗೆ ಚಾಪೆ ಕಟ್ಟಿಕೊಟ್ಟಿದ್ದಾರೆ. ರೀಡಿಂಗ್ ಟೇಬಲ್, ಊಟ ಮಾಡೋದಕ್ಕೆ ಡೈನಿಂಗ್ ಟೇಬಲ್ ನಿಂದ ಹಿಡಿದು ದಿನ ಬೆಳಗ್ಗೆ ಆದ್ರೆ ಮಸಾಜ್ ಮಾಡೋದಕ್ಕೆ ಇಬ್ಬರು ಕೈದಿಗಳನ್ನ ಕೂಡ ಕೊಟ್ಟಿದ್ದಾರೆ.

ಈ ಮಧ್ಯೆ ಜೈಲಲ್ಲಿ ಶಶಿಕಲಾಗೆ ರಾಯಲ್ ಟ್ರೀಟ್‍ಮೆಂಟ್ ನೀಡ್ತಿರೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದು ನೇತೃತ್ವದ ರಾಜ್ಯ ಸರ್ಕಾರ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೊಬ್ಬರಿಂದ ತನಿಖೆಗೆ ತೀರ್ಮಾನಿಸಿದೆ. ಸಂಜೆಯೊಳಗೆ ಸರ್ಕಾರ ತನಿಖಾಧಿಕಾರಿಯ ಹೆಸರು ಅಂತಿಮಗೊಳಿಸಲಿದೆ. ಈ ನಡುವೆಯೇ ಇಂದು ಕಾರಗೃಹಕ್ಕೆ ಗೃಹ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಜೈಲು ಅಕ್ರಮಗಳ ಬಗ್ಗೆ, ಫೈವ್‍ಸ್ಟಾರ್ ಟ್ರೀಟ್‍ಮೆಂಟ್ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್, ಡಿಐಜಿ ರೂಪರಿಂದಲೂ ಮಾಹಿತಿ ಸಂಗ್ರಹ ಸಾಧ್ಯತೆಯಿದೆ. ಅಲ್ಲದೇ ಜೈಲಾಧಿಕಾರಿ ಕೃಷ್ಣಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳನ್ನ ವಿಚಾರಣೆ ನಡೆಸುವ ಸಾಧ್ಯತೆಯಿದೆ.

https://www.youtube.com/watch?v=VUvHqCfFg0E&feature=youtu.be

Comments

Leave a Reply

Your email address will not be published. Required fields are marked *