ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

ಕಾರವಾರ: ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎಂದು ಶಿರಸಿ ಸಮೀಪದ ಕಾನಗೋಡಿನಲ್ಲಿ ಶಿಬಿರ ಆಯೋಜಿಸಿ ಮೋಸ ಮಾಡುತ್ತಿದ್ದ ನಕಲಿ ವೈದ್ಯನೊಬ್ಬ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

ಹುಬ್ಬಳ್ಳಿ ಮೂಲದ ಮುಕೇಶ್ ತಿವಾರಿ ಎನ್ನುವ ನಕಲಿ ವೈದ್ಯ ಜನರನ್ನು ವಂಚಿಸಿ ದುಡ್ಡು ದೋಚುತಿದ್ದ. ಮುಕೇಶ್ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾನಗೋಡಿನಲ್ಲಿ ಆರೋಗ್ಯ ಶಿಬಿರ ನಡೆಸಿ, ಸ್ಥಳೀಯರಿಂದ ದುಡ್ಡು ದೋಚುತ್ತಿದ್ದ. ಖಚಿತ ಮಾಹಿತಿ ಪಡೆದು ಶಿಬಿರದ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಬರುತ್ತಿದ್ದಂತೆ ಸತೀಶ್ ಸ್ಥಳದಿಂದ ಓಡಿ ಹೋಗಿದ್ದಾನೆ.

ಮುಕೇಶ್ ಈ ಹಿಂದೆಯೂ ಶಿರಸಿಯ ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ವಿಷನ್’ ಎಂಬ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದನು. 36 ವಿವಿಧ ಆರೋಗ್ಯ ತಪಾಸಣೆಗಳನ್ನು ಶಿಬಿರದಲ್ಲಿ ಮಾಡಲಾಗುತ್ತದೆ. 10 ಸಾವಿರ ರೂ. ತಪಾಸಣೆಯನ್ನು ಕೇವಲ ಒಂದು ಸಾವಿರ ರೂ. ನಲ್ಲಿ ಮಾಡಲಾಗುತ್ತದೆ ಹಾಗೂ 100 ರೂ.ಗೆ ದೇಹ ತಪಾಸಣೆ ಮಾಡಲಾಗುತ್ತದೆ ಎಂದು ವಂಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಿಬಿರ ಆಯೋಜಿಸಿ, ಅದನ್ನು ಸ್ಥಳೀಯ ಮುಖಂಡರಿಂದ ಉದ್ಘಾಟನೆ ಮಾಡಿಸಿ, ಯಾರಿಗೂ ಅನುಮಾನ ಬಾರದಂತೆ ನಟಿಸುತ್ತಿದ್ದ. ಕಾನಗೋಡಿನಲ್ಲಿ “ವೀ ಫಾರ್ ಯು” ಎಂಬ ಸಂಸ್ಥೆಯ ಹೆಸರಿನಲ್ಲಿ ಮುಕೇಶ್ ಶಿಬಿರ ಪ್ರಾರಂಭಿಸಿದ್ದ. ಆತನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಸ್ಥಳೀಯರು ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಅರಿತ ಮುಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಕೆಲವು ಮಾತ್ರ ಸಿಬ್ಬಂದಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕಿತ್ಸೆಗಾಗಿ ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಇದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *