ವಿಜಯ್‌ ನೋಡೋದಕ್ಕೆ ಮಕ್ಕಳೂ ಊಟ, ತಿಂಡಿ ಬಿಟ್ಟು ನಿಂತಿದ್ರು, ಕೆಲವರು ನೀರಿಗಾಗಿ ಚೀರಾಡ್ತಿದ್ರು: ಪ್ರತ್ಯಕ್ಷದರ್ಶಿ ಹೇಳಿಕೆ

– ವಿದ್ಯುತ್ ಕಂಬಗಳ ಮೇಲೂ ಹತ್ತಿ ಕುಳಿತಿದ್ರು

ಚೆನ್ನೈ: ನಟ ವಿಜಯ್‌ (Thalapathy Vijay) ನೋಡೋದಕ್ಕಾಗಿಯೇ ಜನ 6 ಗಂಟೆಗೂ ಹೆಚ್ಚು ಸಮಯದಿಂದ ನಿಂತಿದ್ದರು. ಮಕ್ಕಳು ಕೂಡ ಊಟ, ತಿಂಡಿ ಬಿಟ್ಟು ನಿಂತಿದ್ರು. ಕೆಲವರು ಮರ, ಅಂಗಡಿಗಳ ಮೇಲೆ ಏರಿದ್ರು, ಇನ್ನೂ ಕೆಲವರು ವಿದ್ಯುತ್‌ ಕಂಬಗಳ ಮೇಲೂ ಹತ್ತಿದ್ರು. ವಿಜಯ್‌ ಬರೋದಕ್ಕೂ ಮುನ್ನವೇ ಬಿಸಿಲಿನಲ್ಲಿ ಬಸವಳಿದಿದ್ರು… ಪ್ರತ್ಯಕ್ಷದರ್ಶಿಯೊಬ್ಬರು ತಮಿಳುನಾಡು ಕಾಲ್ತುಳಿತ ದುರಂತದ ಬಗ್ಗೆ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಆಡಿದ ಮಾತುಗಳಿವು.

ಕಣ್ಣ ಮುಂದೆ ಇಬ್ಬರು ಸ್ಪಾಟ್‌ ಡೆತ್‌ ಆಗಿದ್ರು, ಸ್ಪೀಕರ್‌ ಬಾಕ್ಸ್‌ ಇಡಲು ಹಾಕಿದ್ದ ಸ್ಟೂಲ್‌ ಬಿದ್ದು ಅಲ್ಲೇ ಇಬ್ಬರು ಸಿಲುಕಿ ಸತ್ರು. ಪುಟ್ಟ ಪುಟ್ಟ ಮಕ್ಕಳು ವಿಜಯ್‌ ನೋಡಬೇಕು ಅಂತಾ ಕಾಯ್ತಿದ್ರು. ವಿಜಯ್‌ ಬರೋದಕ್ಕೂ ಮುನ್ನವೇ ಬಿಸಿಲಿನಲ್ಲಿ ಬಸವಳಿದಿದ್ದರು, ಊಟ, ತಿಂಡಿ ನೀರೂ ಇಲ್ಲದೇ ಬಳಲಿದ್ರು. ಕೆಲವರು ನೀರು ನೀರಿಗಾಗಿ ಚೀರಾಡ್ತಿದ್ರು, ನೋಡ ನೋಡ್ತಿದ್ದಂತೆ ಮಹಿಳೆಯರು, ಮಕ್ಕಳು ಕುಸಿದು ಬಿದ್ರು. ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು. ಈ ಹಿಂದಿನ ರ‍್ಯಾಲಿಗಳಲ್ಲಿ ಹೀಗೆ ಆಗಿರಲಿಲ್ಲ. ನಟ ವಿಜಯ್‌ ನೋಡಲು ಜನರಲ್ಲಿದ್ದ ಉನ್ಮಾದವೇ ಇದಕ್ಕೆ ಕಾರಣ ಅಂತ ಹೇಳ್ತಿದ್ದಾರೆ ಪ್ರತ್ಯಕ್ಷದರ್ಶಿಗಳು. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

6 ಗಂಟೆಗೂ ಹೆಚ್ಚು ಕಾಲ ಕಾದು ಕುಳಿತಿದ್ದ ಬೆಂಬಲಿಗರು
ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್‌ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಇದು ದುರಂತಕ್ಕೆ ಮೊದಲ ಕಾರಣ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ಕಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು. ಇತ್ತ ಕಾಲ್ತುಳಿತದಲ್ಲಿ ಸಾವು ಹೆಚ್ಚಾಗ ತೊಡಗಿದೆ. 8 ಮಕ್ಕಳು, 16 ಮಹಿಳೆಯರು ಸೇರಿ 39 ಜನ ಮೃತಪಟ್ಟಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗಳಿಗೆ ರವಾನಿಸಲಾಯ್ತು. ರ‍್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್‌ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.