ಪಕ್ಷದಿಂದ ಯತ್ನಾಳ್‌ ಉಚ್ಚಾಟಿಸಿ – ಬಿಜೆಪಿ ಜಿಲ್ಲಾಧ್ಯಕ್ಷರ ಸಭೆಯಲ್ಲಿ ನಿರ್ಣಯ

ಬೆಂಗಳೂರು: ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಮಾಡಬೇಕು ಎಂಬ ನಿರ್ಣಯವನ್ನು ಬಿಜೆಪಿ (BJP) ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರಿಗೆ ಬೈಯುವುದು ಕಾರ್ಯಕರ್ತರಿಗೆ ಬೈಯುವುದಕ್ಕೆ ಸಮ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಸಿ ಕೆ ರಾಮಮೂರ್ತಿ (CK Ramamurthy) ಹೇಳಿದರು. ಇದನ್ನೂ ಓದಿ: ನನಗೆ ನೋಟಿಸ್‌ ಬಂದಿಲ್ಲ, ವಾಟ್ಸಪ್‌ನಲ್ಲಿ ಬಂದಿದ್ದನ್ನು ನಂಬಲ್ಲ: ಯತ್ನಾಳ್‌

 

ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಸಭೆಯ ಬಳಿಕ ಮಾತನಾಡಿದ ಅವರು, ನಾವು ಎಲ್ಲ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರಿಗೂ ಸಭೆಗೆ ಬರುವಂತೆ ಆಹ್ವಾನ ನೀಡಿದ್ದೆವು. 21 ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು. ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದ ಈಗ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ರಾಜ್ಯಾಧ್ಯಕ್ಷರಿಗೆ ಅವಮಾನ ಆಗುವಂತೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನಮಗೆ ಪಕ್ಷ ಮುಖ್ಯ, ಪಕ್ಷ ಉಳಿಯುವುದು ಮುಖ್ಯ ಎಂದರು.

ಮಂಗಳವಾರ ದೆಹಲಿಯಿಂದ ತರುಣ್ ಚುಗ್ ಬರುತ್ತಿದ್ದಾರೆ. ಅವರಿಗೆ ನಾವೆಲ್ಲ ಪಕ್ಷದೊಳಗೆ ಭಿನ್ನಮತ ಶಾಶ್ವತವಾಗಿ ಸರಿ ಮಾಡಿ ಎಂದು ಮನವಿ ಮಾಡುತ್ತೇವೆ. ಪಕ್ಷವೇ ಮೊದಲು, ಪಕ್ಷ ತಾಯಿ ಸಮಾನ ಎಂದು ಹೇಳಿದರು.

 

ಮಂಡ್ಯ, ಮೈಸೂರು, ಹಾವೇರಿ, ಕೊಪ್ಪಳ, ಬೆಂಗಳೂರು ಉತ್ತರ ದಕ್ಷಿಣ, ಕೇಂದ್ರ , ಗ್ರಾಮಾಂತರ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಮಧುಗಿರಿ, ರಾಮನಗರ, ದಾವಣಗೆರೆ, ಕಲಬುರಗಿ, ಶಿವಮೊಗ್ಗ, ರಾಯಚೂರು, ಕೊಡಗು, ಬೀದರ್ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು.