ನನ್ನ ಹೆಸರಲ್ಲಿ ಸೋಲಾರ್ ಪ್ಲ್ಯಾಂಟ್ ಇದ್ದರೆ ಸರ್ಕಾರಕ್ಕೆ ಬರೆದು ಕೊಡ್ತೀನಿ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ನನ್ನ ಹೆಸರಿನಲ್ಲಿ ಸೋಲಾರ್ ಪ್ಲ್ಯಾಂಟ್ ಇದೆ ಎಂದು ದಾಖಲೆ ತೋರಿಸಿದ್ರೆ ಅದನ್ನು ಚಾಮುಂಡಿ ತಾಯಿಯ ಆಣೆಯಾಗಿ ಸರ್ಕಾರದ ಬೊಕ್ಕಸಕ್ಕೆ ಬರೆದು ಕೊಡುತ್ತೇನೆ. ಎಲ್ಲ ಆರೋಪಗಳಿಗೂ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು, ಕೆಲ ಸುದ್ದಿಗಳನ್ನು ವೈಭವೀಕರಿಸಿ ತೋರಿಸಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್ ಕೇವಲ ನನ್ನ ತಮ್ಮನಿಗೆ ಮಾತ್ರ ಸಾಲ ನೀಡಿಲ್ಲ. ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುವ ಅಪೆಕ್ಸ್ ಬ್ಯಾಂಕ್ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು ಕಾನೂನುಬದ್ಧವಾಗಿ ಸಾಲ ನೀಡಿರುತ್ತದೆ. ನಮ್ಮ ಎಲ್ಲ ವ್ಯವಹಾರಗಳು ಕಾನೂನಿನ ಚೌಕಟ್ಟಿನಲ್ಲಿ ನಡೆದಿವೆ ಎಂದು ಸ್ಪಷ್ಟಪಡಿಸಿದರು.

ಎಲ್ಲವೂ ವಿಚಾರಣೆ ಹಂತದಲ್ಲಿರುವಾಗ ಕಲ್ಪಿತ ಸುದ್ದಿಗಳು ಬಿತ್ತರವಾಗುತ್ತಿವೆ. ಸತ್ಯಕ್ಕೆ ಹತ್ತಿರ ಸುದ್ದಿಗಳು ಬಿತ್ತರವಾದ್ರೆ ಏನು ಆಗಲ್ಲ. ಆದ್ರೆ ನಾನು ಕಲ್ಪನೆಯೂ ಮಾಡಿಕೊಳ್ಳದ ರೀತಿಯಲ್ಲಿ ಸುದ್ದಿಗಳು ಬಿತ್ತರವಾಗೋದು ನೋಡಿ ವಿಚಿತ್ರ ಅನ್ನಿಸುತ್ತಿದೆ. ನನ್ನ ಕ್ಷೇತ್ರದ ಜನರಿಗೆ ನಾನು ಹೇಗೆ ಎಂಬುವುದು ಗೊತ್ತಿದೆ ಎಂದರು.

ಜಾರಿ ನಿರ್ದೇಶನಾಲಯ ನನ್ನನ್ನು ವಿಚಾರಣೆಗೆ ಮತ್ತೊಮ್ಮೆ ಕರೆದಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅಪೆಕ್ಸ್ ಬ್ಯಾಂಕ್ ನಿಂದ ತಮ್ಮ ಚನ್ನರಾಜು ಸಾಲ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಕೆ.ಎನ್.ರಾಜಣ್ಣ ವಿಚಾರಣೆ ಹೋಗುತ್ತಾರೆ. ಇಡಿ ಮತ್ತು ಸಿಬಿಐ ಬಗ್ಗೆ ಕಲ್ಪನೆ ಇಲ್ಲ. ಹಾಗಾಗಿ ಗೊತ್ತಿಲ್ಲದ ವಿಚಾರ ಬಗ್ಗೆ ಮಾತನಾಡುವುದಿಲ್ಲ. ಇಡಿ ಅಧಿಕಾರಿಗಳು ತುಂಬಾನೇ ಸಮಾಧಾನವಾಗಿ ಪ್ರಶ್ನೆಗಳನ್ನು ಕೇಳಿ ನನ್ನಿಂದ ಉತ್ತರ ಪಡೆದುಕೊಂಡರು. ನನ್ನ ಉತ್ತರಗಳು ಇಡಿ ಅಧಿಕಾರಿಗಳಿಗೆ ಸಮಾಧಾನ ಆದಂತೆ ಕಾಣುತ್ತಿದೆ. ಹಾಗಾಗಿ ಮತ್ತೊಮ್ಮೆ ವಿಚಾರಣೆಗೆ ಕರೆದಿಲ್ಲ ಎಂದು ತಿಳಿಸಿದರು.

ಇದೆಲ್ಲ ರಾಜಕೀಯ, ದೇವಾನುದೇವತೆಗಳಿಗೆ ಅಮೃತ ಮತ್ತು ವಿಷನೂ ಬಂದಿದೆ. ಅಮೃತ ಬಂದಾಗ ಖುಷಿ ಪಡೋದರ ಜೊತೆಗೆ ವಿಷ ಬಂದಾಗಲೂ ಎದುರಿಸುವ ಧೈರ್ಯ ಇರಬೇಕು. ಇಂತಹ ಕಷ್ಟಗಳನನು ಸಹಿಸಿಕೊಳ್ಳುವ ಶಕ್ತಿ ದೇವರು ನನಗೆ ಕೊಡಲಿ ಮತ್ತು ವಿರೋಧಿಗಳಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

Comments

Leave a Reply

Your email address will not be published. Required fields are marked *