ಮೊದಲ ಸುದ್ದಿಗೋಷ್ಠಿಯಲ್ಲೂ ಪ್ರಶ್ನೆ ಎದುರಿಸದ ಪ್ರಧಾನಿ – ರಾಹುಲ್ ಗಾಂಧಿ ಲೇವಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ್ದು, ಆದರೆ ಈ ವೇಳೆ ಯಾವುದೇ ಪ್ರಶ್ನೆಗಳನ್ನು ಮಾಧ್ಯಮಗಳಿಂದ ಎದುರಿಸದಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾ ಸುದ್ದಿಗೋಷ್ಠಿ ಸಮಯದಲ್ಲೇ ರಾಹುಲ್ ಗಾಂಧಿ ಕೂಡ ದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಲೋಕಸಭಾ ಚುನಾವಣೆ ಪೂರ್ಣಗೊಳ್ಳಲು ನಾಲ್ಕೈದು ದಿನ ಬಾಕಿ ಇರುವ ಸಂದರ್ಭದಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಮೋದಿಗೆ ಅನುಕೂಲ ಆಗುವಂತೆಯೇ ವೇಳಾಪಟ್ಟಿ ಮಾಡಿದೆ. ಆಯೋಗ ಪಕ್ಷಪಾತಿಯಾಗಿದೆ ಎಂದು ಕಿಡಿಕಾರಿದರು. ಇದೇ ವೇಳೆ ಲೋಕಸಭೆ ಚುನಾವಣೆಯ ಬಳಿಕವೇ ಬಿಜೆಪಿಯೇತರ ಪ್ರಧಾನಿ ಹುದ್ದೆ ನಿರ್ಧಾರ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಟ್ವಿಟ್ಟರ್ ನಲ್ಲೂ ಈ ಕುರಿತು ಮೋದಿ ಅವರ ಕಾಲೆಳೆದಿರುವ ರಾಹುಲ್, ಮೋದಿ ಜಿ ಅಭಿನಂದನೆಗಳು. ಅರ್ಧ ಯುದ್ಧವನ್ನು ಮಾಡುವ ಮೂಲಕ ಅತ್ಯುತ್ತಮ ಪತ್ರಿಕಾಗೋಷ್ಠಿಯನ್ನ ನಡೆಸಿದ್ದೀರಿ. ಮುಂದಿನ ಬಾರಿ ಅಮಿತ್ ಶಾ ಅವರು ನಿಮಗೆ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಕೇಂದ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಪ್ರಧಾನಿ ಹುದ್ದೆಗಾಗಿ ಪಟ್ಟು ಹಿಡಿಯುವುದಿಲ್ಲ. ಎನ್‍ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮ ಮುಖ್ಯ ಗುರಿ ಎಂದಿದ್ದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇಂದು ಯೂ-ಟರ್ನ್ ಹೊಡೆದಿದ್ದಾರೆ. ಶತಮಾನ ಹಳೆಯ ಹಾಗೂ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ನಿಶ್ಚಿತವಾಗಿಯೂ ಪ್ರಧಾನಿ ಹುದ್ದೆಗಾಗಿ ಹಕ್ಕು ಮಂಡಿಸಲಿದೆ. ಅವಕಾಶ ದೊರೆತರೆ ಐದು ವರ್ಷಗಳ ಕಾಲ ಸರ್ಕಾರ ನಡೆಸಲು ಅತಿದೊಡ್ಡ ಪಕ್ಷಕ್ಕೆ ಗೊತ್ತಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *