SSLC ಪರೀಕ್ಷೆಗೆ ಮುಳುವಾದ ಗಡ್ಡ- ವಿದ್ಯಾರ್ಥಿ ಕೈ ತಪ್ಪಿದ ಪರೀಕ್ಷೆ!

ವಿಜಯಪುರ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯೊಬ್ಬ ಗಡ್ಡ ಬಿಟ್ಟಿದ್ದಕ್ಕೆ ಆತ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅನುಮತಿ ನೀಡದ ಘಟನೆ ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚವನಬಾಯಿ ಗ್ರಾಮದ ನಾಗಪ್ಪ ಸಂಗಪ್ಪ ನಾಲತವಾಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಿಂದ ವಂಚಿತನಾಗಿರುವ ವಿದ್ಯಾರ್ಥಿ. ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿದ್ಯಾರ್ಥಿ ಹರಕೆ ಹೊತ್ತುಕೊಂಡಿದ್ದ ಕಾರಣಕ್ಕೆ ಗಡ್ಡ ಬಿಟ್ಟಿದ್ದನು. ಶುಕ್ರವಾರ ನಡೆದಿದ್ದ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಹೋದಾಗ ಹಾಲ್ ಟಿಕೆಟ್‍ನಲ್ಲಿದ್ದ ಭಾವಚಿತ್ರಕ್ಕೂ ವಿದ್ಯಾರ್ಥಿಯ ಮುಖಕ್ಕೂ ಹೊಂದಾಣಿಕೆ ಆಗದ ಹಿನ್ನೆಲೆ ಆತ ಪರೀಕ್ಷೆ ಬರೆಯಲು ಮೇಲ್ವಿಚಾರಕರು ನಿರಾಕರಿಸಿದ್ದಾರೆ. ವಿದ್ಯಾರ್ಥಿ ಭಾವಚಿತ್ರದಲ್ಲಿ ಇರುವುದು ನಾನೇ ಎಂದು ಗೋಗರಿದರೂ ಪರೀಕ್ಷಾ ಕೇಂದ್ರದ ಉಸ್ತುವಾರಿ ಮಾತ್ರ ಒಪ್ಪಲಿಲ್ಲ. ಇದರಿಂದ ವಿದ್ಯಾರ್ಥಿ ಪರೀಕ್ಷೆ ಬರೆಯದೆ ಮನೆಗೆ ಹಿಂದಿರುಗಿದ್ದಾನೆ.

ಅಲ್ಲದೆ ಈ ಬಗ್ಗೆ ವಿದ್ಯಾರ್ಥಿ ದೂರು ನೀಡಲು ಮುಂದಾದರೂ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಸ್ವೀಕರಿಸಿಲ್ಲ. ಬಳಿಕ ಈ ಘಟನೆ ಬಗ್ಗೆ ವಿಜಯಪುರ ಡಿಡಿಪಿಐ ಪ್ರಸನ್ನಕುಮಾರ ದೂರವಾಣಿ ಮೂಲಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಈ ಕುರಿತು ಮಾಹಿತಿ ಇಲ್ಲ. ಫೋಟೋ ಹೊಂದಾಣಿಕೆಯಾಗದಿದ್ದರೆ ವಿದ್ಯಾರ್ಥಿ ತಾನು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪ್ರಮಾಣ ಪತ್ರ ತರಬೇಕಿತ್ತು. ಈ ಕುರಿತು ಮಾಹಿತಿ ಪಡೆದು ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *