‘ಹೋಗೋಲೋ ಸಿದ್ದರಾಮಯ್ಯ’ – ಸಿದ್ದು ವಿರುದ್ಧ ಮುನಿಯಪ್ಪ ಏಕವಚನದಲ್ಲೇ ಗರಂ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೈ ನಾಯಕರ ನಡುವಿನ ಅಸಮಾಧಾನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಎದುರೇ ಸ್ಫೋಟಗೊಂಡಿದೆ.

ಸಭೆಗೆ ಡಿಸಿಎಂ ಪರಮೇಶ್ವರ್ ಗೈರು ಹಾಜರಿ ಸೇರಿದಂತೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯ ಸೋಲಿನ ಹೊಣೆ, ಪಕ್ಷದಲ್ಲಿನ ನಾಯಕರ ಗುಂಪುಗಾರಿಕೆ, ತಾರತಮ್ಯ ವಿಚಾರದಲ್ಲಿ ನಾಯಕರ ನಡುವೆ ಇದ್ದ ಮುನಿಸು ಸ್ಫೋಟಗೊಂಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಸಭೆ ಆರಂಭಕ್ಕೂ ಮುನ್ನ ಕೈ ನಾಯಕರ ನಡುವೆ ಗಲಾಟೆ ನಡೆದಿದ್ದು, ಪರಮೇಶ್ವರ್ ಗೆ ಕಾಯುತ್ತಿರುವಾಗಲೇ ಸಂಸದ ಬಿ.ಕೆ.ಹರಿಪ್ರಸಾದ್ ಅವರು ದಿನೇಶ್ ಗುಂಡೂರಾವ್ ಗೆ ಕ್ಲಾಸ್ ತಗೆದುಕೊಂಡಿದ್ದರು. ಪಕ್ಷ ಮುನ್ನಡೆಸಿ ಅಂದರೆ ನಿಮ್ಮ ಗುಂಪನ್ನು ಮುನ್ನಡೆಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿ ದಿನೇಶ್ ರನ್ನು ತರಾಟೆಗೆ ತೆಗೆದುಕೊಂಡು, ಒಂದಾದರೂ ಸಭೆಯನ್ನ ಸರಿಯಾಗಿ ನಡೆಸಿದ್ದೀರಾ. ನೀವು ಪಕ್ಷದ ಅಧ್ಯಕ್ಷರಾ ಅಥವಾ ಪಕ್ಷದ ಒಳಗಿನ ಗುಂಪುಗಾರಿಕೆ ತಂಡದ ಅಧ್ಯಕ್ಷರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಿಮ್ಮ ವರ್ತನೆಯೆ ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಹರಿಪ್ರಸಾದ್ ಮಾತಿಗೆ ಕಕ್ಕಾಬಿಕ್ಕಿಯಾದ ದಿನೇಶ್, ಏನೂ ಮಾತನಾಡಿದೆ ಮೌನ ವಹಿಸಿದ್ದರು ಎಂಬುದಾಗಿ ತಿಳಿದುಬಂದಿದೆ. ಇದನ್ನು ಓದಿ: ನಾನು ರಿಸೈನ್ ಮಾಡ್ತೀನಿ, ಯಾರು ಬೇಕಾದ್ರೂ ಅಧ್ಯಕ್ಷರಾಗಿ- ದಿನೇಶ್ ಗುಂಡೂರಾವ್

ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ರೋಷನ್ ಬೇಗ್ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ. ನನ್ನನ್ನು ಸೋಲಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ತಂಡದ ವಿರುದ್ಧ ದೂರು ಕೊಟ್ಟರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಇದೇ ವೇಳೆ ಮುನಿಯಪ್ಪ ಕೂಡ ಗರಂ ಆದರು. ರಮೇಶ್ ಕುಮಾರ್ ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತೀರಲ್ವ. ಪಕ್ಷದಲ್ಲಿ ಒಬ್ಬೊಬ್ಬರಿಗೆ ಒಂದು ನ್ಯಾಯನಾ ಎಂದು ಪ್ರಶ್ನಿಸಿ ದಿನೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧವೂ ಮುನಿಯಪ್ಪ ಕಿಡಿಕಾರಿದ್ದು, 2018 ರ ಚುನಾವಣೆ ಮತ್ತು ಲೋಕಸಭಾ ಚುನಾವಣೆ ನಿಮ್ಮ ನೇತೃತ್ವದಲ್ಲಿ ಹೋದೆವು. ಆದರೆ ಎರಡರಲ್ಲೂ ಸೋಲನುಭವಿಸದೆವು. ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರು. ರಾಜ್ಯದಲ್ಲಿ ಯಾರು ನೈತಿಕ ಹೊಣೆ ಹೊತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಟಿಕೆಟ್ ನಿಮಗೆ ಬೇಕಾದವರಿಗೆ ಕೊಟ್ಟುಕೊಳ್ತೀರಿ. ಪಕ್ಷದ ಸೋಲಿಗೆ ಯಾರು ಹೊಣೆ ಎಂದು ಕೆಎಚ್ ಮುನಿಯಪ್ಪ ಖಡಕ್ಕಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

ಸಿದ್ದರಾಮಯ್ಯ ಎದುರು ಅವಾಜ್ ಹಾಕಿರುವ ಮುನಿಯಪ್ಪ ಅವರು, “ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಯಾವ ಸೀಮೆ ನಾಯಕ” ಎಂದಿದ್ದಾರೆ. ಇದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು,”ಮುನಿಯಪ್ಪ ನೀನು ಸರಿಯಾಗಿ ಮಾತನಾಡು, ಗೆಲ್ಲಲು ಆಗದಿದ್ದರು ಮಾತನಾಡುತ್ತೀಯಾ” ಎಂದಿದ್ದು, ಇದಕ್ಕೆ ಮತ್ತಷ್ಟು ಕೋಪಗೊಂಡ ಮಾಜಿ ಸಂಸದರು, “ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ. ಎಲ್ಲಿಂದಲೋ ಬಂದು ನನ್ ಎದುರೇ ಮಾತಾಡ್ತಿಯಾ. ನನ್ನನ್ನು ಸೋಲಿಸಿದ್ದು ನೀನೇ, ಕಳ್ಳಾಟ ಆಡುತ್ತೀಯಾ” ಎಂದು ಏಕವಚನದಲ್ಲೇ ಕಿತ್ತಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

ಇಂದು ನಡೆದ ಸಭೆಯಲ್ಲಿ ಈಶ್ವರ್ ಖಂಡ್ರೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಸಾಕೇಜ್ ಶೈಲಜನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಉಪಸ್ಥಿತರಿದ್ದರು. ಆದರೆ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಅಸಮಾಧಾನ ಗೊಂದಲಗಳು ಇರುವುದು ಬಿಜೆಪಿಯಲ್ಲಿ ನಮ್ಮಲ್ಲಿ ಅಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *