ಅಣ್ಣನ ನಾಲಿಗೆ ಉದ್ದ, ಆಗಾಗ ಹೊರಗೆ ಬರುತ್ತೆ: ಸತೀಶ್ ಜಾರಕಿಹೊಳಿ ವ್ಯಂಗ್ಯ

ಬೆಳಗಾವಿ: ಅಣ್ಣನ ನಾಲಿಗೆ ಉದ್ದ ಇದೆ. ಹೀಗಾಗಿ ಆಗಾಗ ಹೊರಗೆ ಬರುತ್ತದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ಸತೀಶ್ ಬಂಡವಾಳ ಬಯಲು ಮಾಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಕಿಡಿಕಾರಿದರು. ನನ್ನ ಬಂಡವಾಳ ಬಯಲು ಮಾಡುವ ಮೊದಲು ಪ್ರವಾಹದ ಸಂದರ್ಭದಲ್ಲಿ 1,200 ಟ್ರ್ಯಾಕ್ಟರ್ ಬಾಡಿಗೆಗೆ ಪಡೆದಿರುವ ಬಗ್ಗೆ ಹೇಳಲಿ. ಶಾಸಕರಾದವರು ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

ಸತೀಶ್ ಷಂಡ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ರಮೇಶ್ ನಾಲಿಗೆ ಉದ್ದ ಇದೆ. ಅದು ಆಗಾಗ ಹೊರಗೆ ಬರುತ್ತದೆ. ಇಂತಹ ಹೇಳಿಕೆಗಳು ನಮಗೆ ಹೊಸದೇನಲ್ಲ. ಅಣ್ಣ ರಾಜ್ಯ ಹಾಗೂ ಮಾಧ್ಯಮಕ್ಕೆ ಹೀರೋ ಇರಬಹುದು, ನಮ್ಮ ಮುಂದೆ ಬಿಗ್ ಝೀರೋ. ನಮ್ಮ ಬಂಡವಾಳ ಏನೂ ಇಲ್ಲ. ಇದ್ದರೆ ಅದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಗೋಕಾಕ್ ಉಪಚುನಾವಣೆ ಫೈಟ್ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯವೇ ಹೊರತು ಸಹೋದರರ ನಡುವೆ ಅಲ್ಲ. ಉಪ ಚುನಾವಣೆಯನ್ನು ವೈಯಕ್ತಿಕ ಚುನಾವಣೆ ಎನ್ನುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಂತ್ರಿ ಮಂಡಲ ಗೋಕಾಕ್‍ನಲ್ಲಿ ಪ್ರಚಾರಕ್ಕೆ ಬರುತ್ತದೆ. ನಮ್ಮ ಕಡೆಯಿಂದಲೂ ಕಾಂಗ್ರೆಸ್ಸಿನ ನಾಯಕರು ಬರುತ್ತಾರೆ. ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಮ್ಮ ಸ್ಟಾರ್ ಪ್ರಚಾರಕರು ಎಂದರು.

ರಮೇಶ್ ಜಾರಕಿಹೊಳಿ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅವರು ಬದ್ಧತೆ ಇಲ್ಲದ ರಾಜಕಾರಣಿ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿತ್ತು. ಆದರೆ ಈಗ ಒಂದು ಹಂತದಲ್ಲಿ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *