2 ತಿಂಗ್ಳ ನಂತ್ರ ಬೆಂಗ್ಳೂರಿಗೆ ಕನಕಪುರ ಬಂಡೆ – ಏರ್‌ಪೋರ್ಟ್‌ನಿಂದ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ

– ವಿರೋಧಿಗಳ ಲೆಕ್ಕ ಚುಕ್ತಾ ಮಾಡ್ತಾರಾ ಡಿಕೆ..?

ನವದೆಹಲಿ: ಆಗಸ್ಟ್ 29 ವಿಚಾರಣೆಗೆಂದು ತೆರಳಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದರು. ಇದೀಗ ಎರಡು ತಿಂಗಳ ಇಡಿ ವನವಾಸದ ಬಳಿಕ ಕನಕಪುರದ ಬಂಡೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಡಿ.ಕೆ ಬ್ಯಾಕ್ ಆಗುತ್ತಿದ್ದಂತೆ ಇತ್ತ ಬೆಂಬಲಿಗರಲ್ಲಿ ರಣೋತ್ಸಾಹ ಮೂಡಿದೆ.

ನಾಲ್ಕು ದಿನದ ವಿಚಾರಣೆ ಹೋಗಿ ಬಂದು ಬಿಡುತ್ತೇನೆ ಎಂದು ಕುಟುಂಬಸ್ಥರು, ಬೆಂಬಲಿಗರಿಗೆ ಹೇಳಿ ಇಡಿ ವಿಚಾರಣೆ ಅಂತ ದೆಹಲಿಗೆ ತೆರಳಿದ್ದ ಡಿಕೆಶಿ ಇಡಿ ಸುಳಿಯಲ್ಲಿ ಸಿಲುಕಿಕೊಂಡು ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿಗಳ ಆರೋಪದಲ್ಲಿ ನ್ಯಾಯಾಂಗ ಬಂಧನವನ್ನು ಎದುರಿಸಬೇಕಾಯಿತು. ಎರಡು ತಿಂಗಳ ಕಾನೂನು ಹೋರಾಟದ ಬಳಿಕ ಡಿಕೆಶಿ ಜಾಮೀನು ಪಡೆದು ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದು, ಅವರನ್ನು ಬರ ಮಾಡಿಕೊಳ್ಳಲು ಬೆಂಬಲಿಗರು ಕಾಯುತ್ತಿದ್ದಾರೆ.

ಬುಧವಾರ ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಕ್ಕರೂ ಬೆಂಗಳೂರಿಗೆ ದೌಡಾಯಿಸಿದೆ ಎರಡು ದಿನ ದೆಹಲಿಯಲ್ಲೇ ಉಳಿದುಕೊಂಡ ಡಿಕೆಶಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿ ಖಜಾಂಚಿ ಅಹ್ಮದ್ ಪಟೇಲ್, ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಜಾಮೀನಿಗೆ ಕಾರಣರಾದ ಹಿರಿಯ ವಕೀಲರಾದ ಮುಕುಲ್ ರೊಹ್ಟಗಿ, ಅಭಿಷೇಕ ಮನುಸಿಂಘ್ವಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ಮಾಡಿದ್ದಾರೆ.

ಪೂರ್ವ ನಿರ್ಧಾರದಂತೆ ದೆಹಲಿಯ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಬೆಳಗ್ಗೆ 11:50 ಕ್ಕೆ ಸ್ಪೇಸ್ ಜೆಟ್ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮಧ್ಯಾಹ್ನ 2:30 ಕ್ಕೆ ಬೆಂಗಳೂರು ತಲುಪಲಿದ್ದು ಭರ್ಜರಿ ವೆಲ್ ಕಮ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿವರೆಗೂ ಮೆರವಣಿಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದು ಮೆರವಣಿಗೆಯಲ್ಲಿ ಬರಲಿರುವ ಡಿ.ಕೆ ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ವಿಸ್ತೃತವಾಗಿ ಮಾತನಾಡಲಿದ್ದಾರೆ.

ಕಳೆದ 50 ದಿನಗಳಿಂದ ನೆಚ್ಚಿನ ನಾಯಕನಿಗೆ ಬಂದ ಸಂಕಷ್ಟ ನೋಡಿ ಮರುಕ ಪಟ್ಟಿದ್ದ ಬೆಂಬಲಿಗರು ಈಗ ಅವರನ್ನ ಬರಮಾಡಿಕೊಳ್ಳಲು ಸಿದ್ದವಾಗಿದ್ದು ಡಿ.ಕೆ ಬೆಂಬಲಿಗರು ಇಂದೇ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ.

Comments

Leave a Reply

Your email address will not be published. Required fields are marked *