ಬಿಜೆಪಿ ಸೇರ್ತಾರೆ ಅನ್ನೋ ಸುರೇಶ್ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು

– ಡಿಸಿ ತಮ್ಮಣ್ಣ ವಿರುದ್ಧ ಗರಂ
– ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ

ಮಂಡ್ಯ: ಬಿಜೆಪಿಗೆ ಹೋಗೋದು, ಕಾಂಗ್ರೆಸ್‍ನಲ್ಲಿ ಉಳಿಯೋದು ಹೇಳೋದಕ್ಕೆ ಅವನು ಯಾರು ಎಂದು ಶಾಸಕ ಸುರೇಶ್ ಗೌಡಗೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.

ಚಲುವರಾಯಸ್ವಾಮಿ ಬಿಜೆಪಿ ಸೇರ್ತಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ ಗರಂ ಆದ ಅವರು, ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ನೋಡೋ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ಲಿ ಅಂತನೇನೋ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಂಡು ನಮ್ಮನ್ನು ಸೋಲಿಸಿದರು. ಸುರೇಶ್ ಗೌಡರು ನಾಲಿಗೆಗೂ, ಮೆದುಳಿಗೂ ಕನೆಕ್ಟ್ ಇಲ್ಲದಂಗೆ ಮಾತಾಡ್ತಾರೆ. ಬಿಜೆಪಿಗೆ ಹೋಗೋದು, ಕಾಂಗ್ರೆಸ್ ನಲ್ಲಿ ಉಳಿಯೋದು ಹೇಳೋದಕ್ಕೆ ಅವನ್ಯಾರು ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಡಿ.ಸಿ.ತಮ್ಮಣ್ಣ ದರ್ಪ ತೋರಿದ ವಿಚಾರದ ಕುರಿತು ಮಾತನಾಡಿದ ಅವರು, ಅದು ತಪ್ಪು. ಸೋತ ತಕ್ಷಣ ಹತಾಶರಾಗಿ ಮಾತನಾಡುವುದು ಸರಿಯಲ್ಲ. ಅವರನ್ನ ಗೆಲ್ಲಿಸಿದ್ದಾರೆ, ಮಂತ್ರಿಯಾಗಿದ್ದಾರೆ. ಅದಕ್ಕೆ ಕೆಲಸ ಮಾಡಬೇಕು. ಲೋಕಸಭೆ ತೀರ್ಮಾನ ಜನರಿಗೆ ಬಿಟ್ಟಿದ್ದು. ಜನರು ನಮ್ಮನ್ನ ಕೇಳಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳೋದಕ್ಕೆ ಆಗಲ್ಲ ಎಂದು ಗರಂ ಆದರು.

ದೇವೇಗೌಡ್ರು ಸೋತಿಲ್ವಾ, ದೇವೇಗೌಡರಿಗಿಂತ ಬಹಳ ಪ್ರಭಾವಿನಾ ಎಂದು ಪ್ರಶ್ನಿಸಿದ ಮಾಜಿ ಸಚಿವ, ಇವರ ಕ್ಷೇತ್ರದಲ್ಲಿ ಹಿನ್ನಡೆಯಾದರೆ ಜನರನ್ನ ಗೆಟೌಟ್ ಅಂದ್ರೆ ಜನಪ್ರತಿನಿಧಿಗೆ ಗೌರವ ತರುವಂತದ್ದಲ್ಲ. ಅವರಿಗೆ ಸಿಎಂ ಎಚ್ಚರಿಕೆ ಕೊಟ್ಟಿರಬೇಕು. ಹತಾಶರಾಗಿ ಮಾತನಾಡಿದ್ದಾರೆ. ಅಷ್ಟಕ್ಕೆ ಕೈ ಬಿಡೋದು ಒಳ್ಳೆಯದು ಎಂದರು.

ಸರ್ಕಾರ ಅಭದ್ರತೆ ಬಗ್ಗೆ ಜೆಡಿಎಸ್ ನಾಯಕರ ಗೊಂದಲ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ನಿಮಗೂ ಗೊತ್ತು, ನಮಗೂ ಗೊತ್ತು. ಚೆನ್ನಾಗಿಲ್ಲ ಎಂಬುದನ್ನ ಚರ್ಚೆ ಮಾಡುವುದಲ್ಲ. ಅದು ವಾಸ್ತವವಾಗಿ ಗೊತ್ತಿರುವ ವಿಚಾರವಾಗಿದೆ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಸರಿ ಪಡಿಸಿಕೊಳ್ಳುತ್ತಾರಾ, ಕ್ಲೋಸ್ ಮಾಡ್ತಾರಾ ಅಥವಾ ಬೇರೆಯವರೇ ಇವರನ್ನ ಕ್ಲೋಸ್ ಮಾಡ್ತಾರಾ ಎಂಬುದನ್ನು ನೋಡೋಣ ಎಂದು ಹೇಳಿದರು.

Comments

Leave a Reply

Your email address will not be published. Required fields are marked *