ಗ್ರಾಮ ವಾಸ್ತವ್ಯ ಕುಟುಕಿದ ಕುಮಾರಸ್ವಾಮಿಯ ಮಾಜಿ ಆಪ್ತ

ಮಂಡ್ಯ: ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟೇ ಹೊರತು ಅದರಿಂದ ಈಗ ಆಗಿರುವ ವ್ಯತ್ಯಾಸಗಳನ್ನ ಸರಿಪಡಿಸಲು ಸಾಧ್ಯವಿಲ್ಲ. ಈಗಾಗಲೇ ಒಂದು ವರ್ಷದಲ್ಲಿ ಅವರು ಯಾರು ಮಾಡಿಕೊಳ್ಳದೇ ಇರೋವಷ್ಟು ಡ್ಯಾಮೇಜನ್ನು ಅವರಾಗಿಯೇ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸದ ಮೂಲಕ ಜನರ ಹತ್ತಿರ ಹೋಗಬೇಕೇ ವಿನಃ ಈ ರೀತಿ ಗ್ರಾಮ ವಾಸ್ತವ್ಯದಿಂದ ಒಂದಿಬ್ಬರು ಬಡವರನ್ನು ಮಾತಾಡಿಸಿದರೆ ಸಾಧ್ಯವಾಗಲ್ಲ. ಬಡವರನ್ನು ಒಬ್ಬರನ್ನು ಮಾತಾಡಿಸಿ ಮತ್ತೊಬ್ಬರನ್ನು ಬಿಡೋದು ಅಲ್ಲ. ಎಲ್ಲಾ ಬಡವರನ್ನು ಒಂದೇ ರೀತಿ ಕಾಣ್ತಾ, ಇಡೀ ರಾಜ್ಯದ ಎಲ್ಲಾ ಬಡವರನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಂಕಷ್ಟದಲ್ಲಿ ಇರುವವರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಕೊಡಬೇಕು. ಅದನ್ನು ಬಿಟ್ಟು ನಾವು ಸಿಕ್ಕಿದ ಕಡೆ ಫೋಟೋ ತೆಗೆಸಿಕೊಂಡು ಅವರಿಗೆ ಸಹಾಯ ಮಾಡಿದೆ. ಇವರಿಗೆ ಸಹಾಯ ಮಾಡಿದೆ ಅನ್ನೋದಲ್ಲ. ಅದನ್ನು ನಾನು ಕೂಡ ಮಾಡಬಹುದು ನೀವೂ ಮಾಡಬಹುದು ಎಂದಿದ್ದಾರೆ.

ಸಿಎಂ ಆದ ಮೇಲೆ ಸಹಾಯ ಮಾಡೋದು ದೊಡ್ಡಸ್ತಿಕೆ ಅಲ್ಲ. ಸಿಎಂ ಆದವರು ಈ ನಾಡಿನ 6 ಕೋಟಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕು. ಅದು ಬಿಟ್ಟು ಈ ರೀತಿಯ ಗ್ರಾಮ ವಾಸ್ತವ್ಯದಿಂದ ಖಂಡಿತಾ ಪ್ರಯೋಜನವಿಲ್ಲ ಎಂದು ಕುಟುಕಿದ್ದಾರೆ.

Comments

Leave a Reply

Your email address will not be published. Required fields are marked *