ಎಲೆಕ್ಷನ್‍ನಲ್ಲಿ ಓಡಾಡಿದ್ದೀರಿ, ರೆಸ್ಟ್ ಮಾಡಿ- ಸುಮಲತಾಗೆ ಚಲುವರಾಯಸ್ವಾಮಿ ಸಲಹೆ

-ನಮ್ಮ ಪರವೇ ಸಮೀಕ್ಷಾ ವರದಿಗಳಿವೆ ಎಂದ ಮಾಜಿ ಸಚಿವ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದ್ದ ಮಂಡ್ಯ ಕ್ಷೇತ್ರದಲ್ಲಿ ಸದ್ಯ ಸೋಲು ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ. ಇದೇ ವೇಳೆ ಇಂದು ಮದುವೆ ಕಾರ್ಯಕ್ರಮವೊಂದರಲ್ಲಿ ಸುಮಲತಾ ಅಂಬರೀಶ್ ಮತ್ತು ಮಾಜಿ ಚಲುವರಾಯಸ್ವಾಮಿ ಅವರು ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮಂಡ್ಯದ ಕನಕ ಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸುಮಲತಾ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಪರಸ್ಪರ ಭೇಟಿಯಾದರು. ಭೇಟಿ ವೇಳೆ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಓಡಾಡಿದ್ದೀರಿ. ಹೀಗಾಗಿ ಈವಾಗ ಸ್ಪಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸುಮಲತಾಗೆ ಚಲುವರಾಯ ಸ್ವಾಮಿ ಸಲಹೆ ನೀಡಿದ್ದಾರೆ.

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯ ಸ್ವಾಮಿ, ಸ್ವಾಭಿಮಾನದ ಗೆಲುವು ಎಂದು ಎಲ್ಲಾ ಸರ್ವೆ ರಿಪೋರ್ಟ್ ನಮ್ಮ ಪರ ಬಂದಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸುಮಲತಾ ಪರ ನಿಂತಿದ್ದಾರಾ ಎಂಬ ಅನುಮಾನ ಮೂಡಲು ಕಾರಣರಾದರು.

ಎಲ್ಲರೂ ಅವರಿಗೆ ಬೇಕಾದಂತೆ ಅಭಿಪ್ರಾಯ ಪಡುತ್ತಿದ್ದಾರೆ. ಸರ್ಕಾರ ಇದ್ದು, ಸಚಿವರು, ಶಾಸಕರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಮುಖ್ಯಮಂತ್ರಿ ಕುಟುಂಬ ಇಷ್ಟು ಜನ ಮಂಡ್ಯದಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ಜನ ಕೆಲಸ ಮಾಡಿ ಫಲಿತಾಂಶ ಬರುವ ಮೊದಲೇ ಗೆಲುವು ನಮ್ಮದು ಅಂದರೆ ಯಾರು ಒಪ್ಪುತ್ತಾರೆ? ಮಂಡ್ಯ ಜನ ತೀರ್ಮಾನ ಮಾಡಿ ಆಗಿದ್ದು, ಅದರ ಪ್ರಕಟಣೆಗಾಗಿ ಕಾಯುತ್ತಿದ್ದೇವೆ. ಅಲ್ಲಿವರೆಗೂ ಕಾಯುವ ತಾಳ್ಮೆಯನ್ನ ಜಿಲ್ಲೆಯ ಜನರು ನಮಗೆ ಕಲಿಸಿದ್ದಾರೆ. ಸುಮಲತಾ ಪರವಾಗಿ ದರ್ಶನ್, ಯಶ್ ಸೇರಿದಂತೆ ಜಿಲ್ಲೆಯ ಹಲವು ಸಂಘಟನೆಗಳು ಹಾಗೂ ಎಲ್ಲ ವರ್ಗದವರು ದುಡಿದಿದ್ದಾರೆ ಎಂದರು. ಇದೇ ವೇಳೆ ಸುಮಲತಾ, ನಿಖಿಲ್ ಪರ ಯಾರು ಬೆಟ್ಟಿಂಗ್ ಕಟ್ಟಬಾರದು. ಯಾರೆ ಸೋತರು ನಮ್ಮ ಜಿಲ್ಲೆಯವರಿಗೆ ನಷ್ಟ ಆಗುತ್ತದೆ. ಹೀಗಾಗಿ ಬೆಟ್ಟಿಂಗ್ ಬೇಡ ಎಂದು ಮನವಿ ಮಾಡಿದರು.

ದೇಶದ ಫಲಿತಾಂಶವೇ ಬೇರೆ ಬರಲಿದ್ದು, ಮಂಡ್ಯ ಜಿಲ್ಲೆಯ ಫಲಿತಾಂಶವೇ ಬೇರೆಯಾಗಲಿದೆ. ಎಲ್ಲಾ ಮಾಧ್ಯಮದವರು ಮಂಡ್ಯವನ್ನೇ ಹೆಚ್ಚು ತೋರಿಸಿದ್ದಾರೆ. ಈ ಶ್ರಮಕ್ಕೆ ಉತ್ತಮ ಫಲಿತಾಂಶ ಬಂದರೆ ಅರ್ಥ ಸಿಗುತ್ತದೆ. ಮಂಡ್ಯ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವ ಬಗ್ಗೆ ನಾನು ಮಾತನಾಡಲ್ಲ. ಫಲಿತಾಂಶ ಬಂದ ಮೇಲೆ ನಾನು ವಿಶ್ಲೇಷಣೆ ಮಾಡುತ್ತೇನೆ ಎಂದರು.

ನನಗೆ ಬಂದಿರುವ ಮಾಹಿತಿ ಅನ್ವಯ ಪುಟ್ಟರಾಜು ಎರಡೂವರೆ ಲಕ್ಷ ಮತಗಳ ಅಂತರಕ್ಕಿಂತ ಕಡಿಮೆ ಬಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಲ್ಲ ಎಂದು ನಿವೃತ್ತಿ ಮಾತನ್ನು ಪರೋಕ್ಷವಾಗಿ ನೆನಪಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ. ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ನಿರಾಕರಿಸಿದ್ದ ಚಲುವರಾಯಸ್ವಾಮಿ ಅವರು ಮೌನವಹಿಸಿದ್ದರು. ಆದರೆ ಅವರ ಬೆಂಬಲಿಗರು ಸ್ವಾಭಿಮಾನಕ್ಕಾಗಿ ಸುಮಲತಾಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು.

ಇದೇ ವೇಳೆ ಮಾತನಾಡಿದ ಸುಮಲತಾ, ಚುನಾವಣೋತ್ತರ ಸಮೀಕ್ಷೆ ವಿಚಾರವನ್ನು ನಾನು ಹೆಚ್ಚು ಗಭೀರವಾಗಿ ಪರಿಗಣಿಸುವುದಿಲ್ಲ. ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರ ಬರುತ್ತದೆ. ಮೇ 23ವರೆಗೂ ಕಾದು ನೋಡೋಣ ಎಂದರು.

ಚಲುವರಾಯಸ್ವಾಮಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಏನೂ ಮಾತಾಡಿಲ್ಲ. ಚುನಾವಣೆ ಮುಗಿದಿದೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಲಗೆ ನೀಡಿದ್ದಾರೆ ಎಂದರು. ಇದೇ ವೇಳೆ ದರ್ಶನ್ ಅವರು ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಹೇಳಿಕೆಯನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಸರ್ಕಾರ ಇದ್ದರು ಕೂಡ ಇದನ್ನು ಅನುಸರಿಸಬೇಕು ಎಂದರು.

Comments

Leave a Reply

Your email address will not be published. Required fields are marked *