ರಾಮನಗರ: ಸರ್ಕಾರ ನ್ಯಾಯವಾಗಿ ರೈತರ ಸಾಲಮನ್ನಾ ಮಾಡಿದ್ದರೆ, ರಾಜ್ಯದ ಎಲ್ಲಾ ರೈತರಿಗೂ ಒಟ್ಟಿಗೆ ಋಣಮುಕ್ತ ಪತ್ರ ನೀಡಿ. ಅದು ನಿಜವಾದ ರೈತರ ಸೇವೆ ಆಗುತ್ತೆ. ಆದರೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುಬೇಡಿ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಕನಕಪುರ ತಾಲೂಕಿನ ಪಡುವಣಗೆರೆಯಲ್ಲಿ ಬರ ವೀಕ್ಷಣೆ ನಡೆಸಿ ಮಾತನಾಡಿದ ಆರ್ ಅಶೋಕ್, ಸರ್ಕಾರ ರಚನೆಯಾದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ 6 ತಿಂಗಳು ಕಳೆದರು ಸಾಲಮನ್ನಾ ಆಗಿಲ್ಲ. ಸಾಲಮನ್ನಾ ಆಗುತ್ತೆ ಎಂದು ಹೇಳುತ್ತಾರೆ. ಆದರೆ ರಾಜ್ಯದ ಜನಕ್ಕೆ ಮುಖ್ಯಮಂತ್ರಿ ಅವರ ಮೇಲೆ ನಂಬಿಕೆ ಇಲ್ಲ. ಸಿಎಂ ಕುಮಾರಸ್ವಾಮಿ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಕಿಡಿಕಾಡಿದರು.

ರಾಜ್ಯ ಜನರಿಗೆ ಋಣಮುಕ್ತ ಪತ್ರ ವಿತರಣೆ ಮಾಡುತ್ತೇನೆ ಎಂದು ಹೇಳುತ್ತೀರಾ. ಆದರೆ ಎಲ್ಲಾ ರೈತರು ಕೊಡುವುದನ್ನು ಬಿಟ್ಟು ನಿಮಗೆ ಬೇಕಾಗಿದ್ದ ನಾಲ್ಕು ಕಡೆ ಕೊಡುತ್ತಿದ್ದೀರಾ. ಇದನ್ನು ರಾಜ್ಯ ರೈತರ ಸಮುದಾಯದ ಎಲ್ಲರಿಗೂ ಕೊಟ್ಟಿದ್ದೀನಿ ಎಂದು ಹೇಳಿದರೆ ಬೊಗಳೆಯಾಗುತ್ತೆ. ರಾಜ್ಯದ ಯಾವುದೋ ಎರಡು ಹಳ್ಳಿಗೆ ಹೋಗಿ 50 ಜನರಿಗೆ ಕೊಟ್ಟರೆ, ಐದು ರಿಂದ ಹತ್ತು ಲಕ್ಷ ರೈತರು ಋಣ ಮುಕ್ತ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಇದು ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಆಗಿದೆ. ಎಲ್ಲಾ ರೈತರಿಗೆ ಋಣ ಮುಕ್ತ ಪತ್ರ ಕೊಟ್ಟರೇ ಆಗ ನಿಜವಾಗಿ ಸಾಲಮನ್ನಾ ಮಾಡಿದಂತೆ ಎಂದರ್ಥ ಎಂದರು.
ಇದಕ್ಕೂ ಮುನ್ನ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಪಡುವಣಗೆರೆಯಲ್ಲಿ ಬರ ವೀಕ್ಷಣೆ ನಡೆಸಿದರು. ಮಳೆಯಿಲ್ಲದೇ ನಾಶವಾಗಿರುವ ಜಮೀನು, ಬತ್ತಿ ಹೋಗಿರುವ ಕೆರೆಯನ್ನ ವೀಕ್ಷಣೆ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply