ಸಿದ್ದರಾಮಯ್ಯ ಅವರೇ ನನ್ನ ನಾಯಕ : ಎ.ಮಂಜು

ಹಾಸನ: ನಾನು ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಇವತ್ತು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ ನನ್ನ ನಾಯಕ ಎಂದು ಹಾಸನ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ ಮಂಜು ಹೇಳಿದ್ದಾರೆ.

ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಿಜೆಪಿ ಸೇರುವ ಮುಂಚೆ ಕಾರ್ಯಕರ್ತರ ಸಭೆ ಮಾಡಿದ್ದೆ. ಅವರೆಲ್ಲರ ಸಲಹೆ ಪಡೆದ ಬಳಿಕವೇ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಈ ದೇಶಕ್ಕೆ ಸಮರ್ಥವಾದ ನಾಯಕ ಬೇಕು. ಅದು ನರೇಂದ್ರ ಮೋದಿ ಮಾತ್ರ. ಅದಕ್ಕಾಗಿ ನಾನು ಈ ಪಕ್ಷಕ್ಕೆ ಬಂದಿದ್ದೇನೆ, ನಾನು ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯ ವೇಳೆ ಮೋದಿ ಹವಾ ಇರಲಿಲ್ಲ. ಈಗ ಇಡೀ ದೇಶದಲ್ಲಿ ಮೋದಿ ಹವಾ ಇದೆ. ಮೋದಿ ಮತ್ತೊಮ್ಮೆ ಮೋದಿ ಎಂಬ ಮಾತು ಇಡೀ ದೇಶ ಹೇಳುತ್ತಿದೆ ಎಂದರು.

ನಾನು ಈ ಚುನಾವಣಾ ನಿಂತಿರುವುದು ಹಾಸನದ ಎರಡನೇ ಹಂತದ ನಾಯಕರ ಧ್ವನಿಯಾಗಿ. ಎರಡನೇ ಹಂತದ ನಾಯಕರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿದ್ದಾರೆ. ಅದಕ್ಕಾಗಿ ನಾನೂ ಅವರೆಲ್ಲರ ಧ್ವನಿಯಾಗಿ ನಿಂತಿದ್ದೇನೆ. ನಮ್ಮ ತಾಲೂಕಿನ ಜೆಡಿಎಸ್ ನಾಯಕರಿಗೆ ಸರಿಯಾದ ಗೌರವ ಇಲ್ಲ. ಅವರು ಕರೆಯುವ ಶೈಲಿಯೇ ಬೇರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ದೇವೇಗೌಡರು ಎಲ್ಲೇ ಹೋದರು ಮೊಮ್ಮಕ್ಕಳನ್ನ ಗೆಲ್ಲಿಸಿ ಎಂದು ಕಣ್ಣೀರು ಹಾಕುತ್ತಾರೆ. ದೇವೇಗೌಡರು ಇಲ್ಲಿಂದ ನಿಲ್ಲಲಿ. ಮಂಡ್ಯದಲ್ಲಿ ಸುಮಲತಾ ನಿಲ್ಲಲಿ ಎಂದು ನಾನು ಚುನಾವಣೆ ಮುಂಚೆಯೇ ಹೇಳಿದ್ದೆ. ದೇಶದ ಪ್ರಧಾನಿ ಮೋದಿ ಗಂಗೆಯನ್ನ ಶುದ್ಧಿ ಮಾಡಿದ್ದಾರೆ. ಈಗ ನಾವೆಲ್ಲ ಸೇರಿ ಹಾಸನವನ್ನ ಶುದ್ಧ ಮಾಡಬೇಕು ಎಂದರು.

ಯಾರಾದರು ದಲಿತರು ಅವರಿಗೆ ಶೇಕ್ ಹ್ಯಾಂಡ್ ಮಾಡಿದರೆ ಸ್ನಾನ ಮಾಡುತ್ತಾರೆ. ಸ್ವಾತಿ ನಕ್ಷತ್ರದ ರೇವಣ್ಣ ಶಾರದಾ ಪೂಜೆ ಮಾಡಿದರೆ ಎಲ್ಲ ಸರಿಯಾಗುತ್ತಾ? ಅದಕ್ಕೆ ಐಟಿ ದಾಳಿ ಆಗಿದ್ದು. ಅವರು ಮಾಡಿದ್ದ ಭ್ರಷ್ಟಾಚಾರದಿಂದ ಐಟಿ ದಾಳಿ ಆಗಿದೆ. ಸ್ವಾತಿ ನಕ್ಷತ್ರ ಆದರೆ ಏನಾಗಿದೆ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *