ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಮತ್ತೊಬ್ಬ ಕನ್ನಡಿಗ – ಮಯಾಂಕ್ ಕುರಿತ ಮಾಹಿತಿ ಇಂತಿದೆ

ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಭಾರೀ ಹೊಡೆತ ನೀಡಿದ್ದು, ಧವನ್ ಬಳಿಕ ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದಾರೆ. ಸದ್ಯ ಈ ಸ್ಥಾನದಲ್ಲಿ ಆಯ್ಕೆ ಸಮಿತಿ ಕನ್ನಡಿಗ ಮಯಾಂಕ್ ಅರ್ಗವಾಲ್ ಅವರಿಗೆ ಸ್ಥಾನ ನೀಡಿದ್ದು, ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಿದ್ದಾರೆ.

28 ವರ್ಷದ ಮಯಾಂಕ್ ಅರ್ಗವಾಲ್ ಇದುವರೆಗೂ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. 6 ವರ್ಷಗಳ ಹಿಂದೆ ಕರ್ನಾಟಕ ಪರ ಫಸ್ಟ್ ಕ್ಲಾಸ್ ಕ್ರಿಕೆಟ್‍ಗೆ ಜಾರ್ಖಂಡ್ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಮಯಾಂಕ್ 144 ಎಸೆತಗಳಲ್ಲಿ 90 ರನ್ ಸಿಡಿಸಿದ್ದರು. ಇದುವರೆಗೂ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ 50 ಪಂದ್ಯಗಳನ್ನಾಡಿರುವ ಇವರು 3,964 ರನ್ ಗಳಿಸಿದ್ದು, ಮಹಾರಾಷ್ಟ್ರ ವಿರುದ್ಧ ಅಜೇಯ 304 ರನ್ ಸಿಡಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಮಯಾಂಕ್, ಡೆಲ್ಲಿ, ಪುಣೆ, ಬೆಂಗಳೂರು, ಪಂಜಾಬ್ ತಂಡಗಳ ಪರ ಆಗಿದ್ದಾರೆ. 2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ್ದ ಮಯಾಂಕ್ 13 ಪಂದ್ಯಗಳಿಂದ 332 ರನ್ ಸಿಡಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿರುವ ಮಯಾಂಕ್, ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ 42 ಎಸೆತಗಳಲ್ಲಿ 76 ರನ್ ಸಿಡಿಸಿ ಮಿಂಚಿದ್ದರು. ಆ ಬಳಿಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 77 ರನ್ ಗಳಿಸಿದ್ದರು. 2 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್ ಗಳಲ್ಲಿ  ಆಡಿರುವ ಮಯಾಂಕ್ 195 ರನ್ ಗಳಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ರಿಷಬ್ ಪಂತ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದು, ಮಯಾಂಕ್ ಈ ಬಳಗದಲ್ಲಿ ಅವಕಾಶ ಪಡೆಯುತ್ತಾರ ಎಂಬ ಕುತೂಹಲ ಮೂಡಿದೆ. ಮಯಾಂಕ್ ಅವರಿಗೆ ಒಂದೊಮ್ಮೆ ಅವಕಾಶ ಲಭಿಸಿದರೆ ಆರಂಭಿಕರಾಗಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದ್ದು, 4ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಆಡುವುದು ಸೂಕ್ತ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *