ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

ಬೆಳಗಾವಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ವೇಳೆ ಎಲ್ಲರಿಗೂ ದೇಶ ಹಾಗೂ ಸೈನಿಕರ ಚಿಂತೆಯಾದರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿಯ ಟಿಳಕವಾಡಿಯಲ್ಲಿ ನಾಥ ಪೈ ಉದ್ಯಾನವನ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶ ಹಾಗೂ ಸೈನಿಕರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿರಬೇಕು. ಇಂಥ ವಿಷಯಗಳಲ್ಲಿ ರಾಜಕೀಯ ಮಾಡದೇ ವಿಶ್ವಕ್ಕೆ ಏಕತೆ ಸಂದೇಶ ಸಾರಬೇಕು ಎಂದರು.

ಏರ್ ಸ್ಟ್ರೈಕ್‍ನಿಂದ 22 ಎಂಪಿ ಸೀಟು ಗೆಲ್ಲುವ ಬಿಎಸ್‍ವೈ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದೇಶದ ಸೈನ್ಯ ಮತ್ತು ಭದ್ರತೆ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಈ ರೀತಿ ಮಾಡುವುದು ಎಲ್ಲರಿಗೂ ಕೂಡ ಕಪ್ಪು ಚುಕ್ಕೆ. ಎಲ್ಲರಿಗೂ ಕೂಡ ದೇಶದ ಮತ್ತು ಸೈನಿಕರ ಚಿಂತೆಯಾದರೆ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮುಂಬೈ ಸ್ಫೋಟದ ವೇಳೆ ಚಿತ್ರೀಕರಣ ನೋಡಲು ಅಲ್ಲಿನ ಮುಖ್ಯಮಂತ್ರಿಯ ಮಗ ಮತ್ತು ನಿರ್ದೇಶಕ ಹೋಗಿದ್ದಕ್ಕೆ ಅಂದು ಮುಖ್ಯಮಂತ್ರಿ ಅವರನ್ನು ಬದಲಿಸಲಾಗಿತ್ತು. ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಎಸ್‍ವೈ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎನ್ನುವದನ್ನು ದೇಶಕ್ಕೆ ತೋರಿಸಲಿ ಎಂದು ಸವಾಲು ಹಾಕಿದರು.

ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಫೈಟ್ ವಿಡಿಯೋ ವಿಚಾರ ಮಾತನಾಡಿ, ಅವರಿಬ್ಬರ ನಡುವೆ ಹೆಣ್ಣುಮಗಳ ವಿಚಾರವಾಗಿ ಜಗಳವಾಗಿರುವುದು ನಂಬಲು ಸಾಧ್ಯವಿಲ್ಲ. ವೈಯುಕ್ತಿಕ ವಿಚಾರಕ್ಕಾಗಿ ಜಗಳ ನಡೆದಿದೆ. ಹೆಣ್ಣುಮಗಳ ವಿಷಯವಾಗಿ ಅವರಿಬ್ಬರ ಮಧ್ಯೆ ಜಗಳವಾಗಿದ್ದು ನನಗೆ ಗೊತ್ತಿಲ್ಲ. ಇದನ್ನು ನಾನು ನೋಡಿಯೂ ಇಲ್ಲ ಕೇಳಿಯೂ ಇಲ್ಲ. ಅವರಿಬ್ಬರು ಸಹೋದರರಂತೆ ಇದ್ದಾರೆ. ಜಗಳ ಕೆಟ್ಟಗಳಿಗೆಯಲ್ಲಿ ಆಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗುತ್ತದೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎನ್ನುವ ವಿಶ್ವಾಸವಿದೆ ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *