ನಾವೆಲ್ಲರೂ ಮಹಾಘಟಬಂಧನದ ಮುಂದಾಳುಗಳು: ಮಮತಾ ಬ್ಯಾನರ್ಜಿ

ಕೋಲ್ಕತಾ: ಬಿಜೆಪಿ ವಿರುದ್ಧ ಮೈತ್ರಿಗೆ ನಾವೆಲ್ಲರೂ ಮುಂದಾಳುಗಳೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತಾದಲ್ಲಿ ಆಂಧ್ರ ಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಜೊತೆಗೆ ಮಮತಾ ಬ್ಯಾನರ್ಜಿ ಇಂದು ಮಹಾಘಟ ಬಂಧನ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಯಾರು ಮಹಾಮೈತ್ರಿಯ ನಾಯಕರು ಅಂತಾ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಪಕ್ಷಗಳ ವರಿಷ್ಠರೇ ಮಹಾಮೈತ್ರಿಯ ನಾಯಕರು. ನಾವೆಲ್ಲರೂ ಸೇರಿ ಮುಂದಾಳತ್ವ ವಹಿಸಲಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಿಬಿಐ ಹಾಗೂ ಆರ್ ಬಿಐ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಬಿಜೆಪಿ ದುರಾಡಳಿತದ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆದಿದೆ. ಈ ಕುರಿತು ಚರ್ಚೆ ನಡೆಸಲು ನವೆಂಬರ್ 22ರಂದು ವಿವಿಧ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರನ್ನು ಸಭೆಗೆ ಆಹ್ವಾನಿಸಲು ಬಂದಿರುವೆ ಎಂದು ತಿಳಿಸಿದರು.

ಏನಿದು ಮಹಾಘಟಬಂಧನ?
ಮುಂಬರುವ ಲೋಕಸಭಾ ಚುನಾವಣಾ ಮಹಾಮೈತ್ರಿಗೆ ಆಂಧ್ರ ಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಎದುರಿಸಲು ಪ್ರಬಲ ಸಿದ್ಧತೆ ನಡೆಸಿದ್ದು, ಈ ಮೈತ್ರಿಯೇ ಮಹಾಘಟಬಂಧನವಾಗಿದೆ.

ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಚಂದ್ರ ಬಾಬು ನಾಯ್ಡು ಅವರು, ನವೆಂಬರ್ 22ರಂದು ದೆಹಲಿಯಲ್ಲಿ ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಇಂದು ಆಹ್ವಾನಿಸಿದ್ದಾರೆ. ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಪ್ರತಿಪಕ್ಷಗಳ ವರಿಷ್ಠರನ್ನು ಭೇಟಿ ಮಾಡಿ, ಸಭೆಗೆ ಆಹ್ವಾನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *