ನನಗೂ ಸಚಿವ ಸ್ಥಾನ ಬೇಕು: ಶಾಸಕ ಕುಮಾರಸ್ವಾಮಿ

ಚಿಕ್ಕಮಗಳೂರು: ಬಿಜೆಪಿ ಪಕ್ಷದಲ್ಲಿ ನಮ್ಮ ಜನಾಂಗದವರು ಯಾರೂ ಮಂತ್ರಿಯಾಗಿಲ್ಲ. ಹಾಗಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಸಾಲದಕ್ಕೆ ನಾನು ಸಿಎಂ ಯಡಿಯೂರಪ್ಪನವರ ನೆಚ್ಚಿನ ಶಿಷ್ಯ. ನನಗೂ ಸಚಿವ ಸ್ಥಾನ ಬೇಕೆಂದು ಜಿಲ್ಲೆಯ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಸಚಿವ ಸ್ಥಾನಕ್ಕೆ ಎರಡನೇ ಬಾರಿ ಕಲ್ಲು ಬೀಸಿದ್ದಾರೆ.

ಬಲಗೈ ಸಮುದಾಯಕ್ಕೆ ಸಚಿವ ಸ್ಥಾನ ಬೇಕೆಂದು ನಮ್ಮ ಜನಾಂಗದ ಮುಖಂಡರು ಸಿಎಂಗೆ ಒತ್ತಾಯಿಸಿದ್ದಾರೆ. ಬೇರೆ ಪಕ್ಷದಲ್ಲಿ ನಮ್ಮ ಜನಾಂಗದವರು ರಾಷ್ಟ್ರೀಯ ನಾಯಕರಾಗಿದ್ದಾರೆ. ನಾವು ಈ ಪಕ್ಷದಲ್ಲಿ ಬೆಳೆಯುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಯಾರೂ ಸಚಿವರಾಗಿಲ್ಲ. ನನಗೆ ಸಚಿವ ಸ್ಥಾನ ಬೇಕೆಂದು ಸಿಎಂ ಬಳಿ ಕೇಳಿದ್ದೇನೆ. ಮುಂದೆ ನೋಡೋಣ ಎಂದಿದ್ದಾರೆ. ಆದರೆ ನನಗೂ ಸಚಿವ ಸ್ಥಾನ ಬೇಕು ಕೊಟ್ಟರೆ ನಿಭಾಯಿಸ್ತಿನಿ ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಕೇಳಿದ್ದೇನೆ. ಕೊಡೋದು ಬಿಡೋದು ಸಿಎಂಗೆ ಬಿಟ್ಟ ವಿಚಾರ. ಕೊಡದಿದ್ರೂ ಬೇಜಾರಿಲ್ಲ ಎಂದಿದ್ದಾರೆ. ನಮ್ಮ ಸಮುದಾಯದಲ್ಲಿ ಮೂರು ಜನ ಶಾಸಕರಿದ್ದೇವೆ, ಈ ಬಾರಿ ಹೆಚ್ಚು ನಿರೀಕ್ಷೆ ಇದೆ. ನನಗೆ ಸಚಿವ ಸ್ಥಾನ ನೀಡದಿದ್ರು ಪರವಾಗಿಲ್ಲ. ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಹೆಚ್ಚಿರುವ ನಮ್ಮ ಛಲವಾದಿ ಜನಾಂಗದ ಯಾರಿಗಾದರು ಸಚಿವ ಸ್ಥಾನ ನೀಡಲಿ ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಮತ್ತೊಮ್ಮೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.

Comments

Leave a Reply

Your email address will not be published. Required fields are marked *