ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

– ಮಹತ್ವದ ನಿರ್ಧಾರ ಕೈಗೊಂಡ ಯುರೋಪಿಯನ್ ಯೂನಿಯನ್
– ಇ-ವೇಸ್ಟ್ ತಪ್ಪಿಸಲು ನಿರ್ಧಾರ

ಬ್ರಸೆಲ್ಸ್: ಅಂದುಕೊಂಡಂತೆ ನಡೆದರೆ ಎಲ್ಲ ಫೋನ್‍ಗಳಿಗೆ ಮತ್ತು ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಇನ್ನು ಮುಂದೆ ಒಂದೇ ರೀತಿ ಚಾರ್ಜರ್ ಗಳನ್ನು ಬಳಕೆ ಮಾಡಬಹುದು.

ಹೌದು. ಯುರೋಪಿಯನ್ ಯೂನಿಯನ್ ಎಲ್ಲ ಫೋನ್‍ಗಳಿಗೆ ಒಂದೇ ಮಾನದಂಡದ ಚಾರ್ಜರ್ ಬಳಸಬೇಕೆಂಬ ನಿಯಮವನ್ನು ಸಿದ್ಧಪಡಿಸಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ ಕಡ್ಡಾಯವಾಗಿ ಸ್ಮಾರ್ಟ್‍ಫೋನ್ ತಯಾರಕಾ ಕಂಪನಿಗಳು ಒಂದೇ ಮಾದರಿಯ ಚಾರ್ಜರ್ ಅನ್ನು ನೀಡಬೇಕಾಗುತ್ತದೆ.

 

ಯಾಕೆ ಈ ನಿಯಮ?
ಸದ್ಯ ಈಗ ಒಂದೊಂದು ಕಂಪನಿಗಳು ಒಂದೊಂದು ರೀತಿ ಚಾರ್ಜರ್ ಗಳೊಂದಿಗೆ ಮಾರುಕಟ್ಟೆಗೆ ಫೋನ್/ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ. ಒಂದು ಫೋನ್ ಹಳತಾದ ಬಳಿಕ ಮತ್ತೊಂದು ಫೋನ್ ಖರೀದಿಸಿದರೆ ಹಳೆಯ ಫೋನ್ ಚಾರ್ಜರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಎಲೆಕ್ಟ್ರಾನಿಕ್ ವೇಸ್ಟ್ ಆಗುತ್ತದೆ.

ಒಂದೇ ರೀತಿಯ ಚಾರ್ಜರ್ ಬಿಡುಗಡೆ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ. ಗ್ರಾಹಕರಿಗೆ ಸ್ವಾತಂತ್ರ್ಯ ಜಾಸ್ತಿ ಸಿಗುತ್ತದೆ ಮತ್ತು ಇ-ವೇಸ್ಟ್ ತಪ್ಪಿಸಲು ಈ ನಿಯಮ ಜಾರಿಗೆ ತರಲು ಮುಂದಾಗಿದೆ.  ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್ 

ಯುರೋಪಿಯನ್ ಯೂನಿಯನ್ ಪ್ರಸ್ತಾಪ ಮಾಡಿರುವ ನಿಯಮಗಳ ಪ್ರಕಾರ ಎಲ್ಲ ಕಂಪನಿಗಳು ಟೈಪ್ ಸಿ ಚಾರ್ಜರ್ ಗಳನ್ನೇ ನೀಡಬೇಕಾಗುತ್ತದೆ. ಫೋನಿಗಳಿಗೆ ಮಾತ್ರ ಅಲ್ಲ ಟ್ಯಾಬ್ಲೆಟ್, ಕ್ಯಾಮೆರಾ, ಹೆಡ್‍ಫೋನ್, ಪೋರ್ಟೆಬಲ್ ಸ್ಪೀಕರ್, ವಿಡಿಯೋ ಗೇಮ್ ಕನ್ಸೋಲ್ ಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ಇಯರ್ ಬಡ್ಸ್, ಸ್ಮಾರ್ಟ್ ವಾಚ್, ಫಿಟ್ ನೆಸ್ ಟ್ರ್ಯಾಕರ್ ಗಳ ಗಾತ್ರ ಸಣ್ಣದಾಗಿರುವುದರಿಂದ ತಾಂತ್ರಿಕ ಕಾರಣಗಳನ್ನು ನೀಡಿ ಈ ಸಾಧನಗಳನ್ನು ಕೈಬಿಡಲಾಗಿದೆ.

2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್ ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‍ಲೆಸ್ ಚಾರ್ಜರ್ ಗಳಿಗೆ ಯಾವುದೇ ಸಮಸ್ಯೆ ಇಲ್ಲ.

ಜಾರಿ ಯಾವಾಗ?
ಈ ನಿಯಮ ಈಗ ಸಿದ್ಧಗೊಂಡಿದ್ದು, ಯುರೋಪಿಯನ್ ಸಂಸತ್ತಿನಲ್ಲಿ ಅನುಮೋದನೆ ಪಡೆದ ಬಳಿಕ ಕಂಪನಿಗಳು ಜಾರಿ ಮಾಡಬೇಕಿದೆ. ವರದಿಗಳ ಪ್ರಕಾರ 2024ರ ವೇಳೆಗೆ ಇದು ಜಾರಿಯಾಗುವ ಸಾಧ್ಯತೆಯಿದೆ. ಶಾಸನ ಜಾರಿಯಾದರೆ ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು ಮಾರಾಟ ಮಾಡಿದರೆ ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.

ಈ ನಿಯಮವನ್ನು ಆಪಲ್ ವಿರೋಧಿಸಿದ್ದು, ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿದೆ.

ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ ಈಗಾಗಲೇ ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿನಲ್ಲಿ ಫೋನುಗಳನ್ನು ಬಿಡುಗಡೆ ಮಾಡಿವೆ.

Comments

Leave a Reply

Your email address will not be published. Required fields are marked *