ರೇವಣ್ಣ ಹೇಳಲು ಹೋಗಿ ರಾವಣ ಎಂದು ಉಚ್ಚರಿಸಿದ್ರು ಈಶ್ವರಪ್ಪ!

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು ಲೋಕೋಪಯೋಗಿ ಸಚಿವ ರೇವಣ್ಣ ಅವರ ಹೆಸರನ್ನು ರಾವಣ ಎಂದು ತಪ್ಪಾಗಿ ಉಚ್ಛರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ರಾಜ್ಯದಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ರಾವಣ ಈ ಮೂವರದ್ದೇ ಸರ್ಕಾರ ಎಂದು ಹೇಳುವ ವೇಳೆ ರೇವಣ್ಣ ಎಂದು ಹೇಳುವ ಬದಲು ರಾವಣ ಎಂದು ಕರೆದಿದ್ದಾರೆ.

ವಿಧಾನಸಭೆಗೆ ಬಾರದೇ ಭೂತದ ಬಂಗಲೆ ಆಗಿದೆ. ಮೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂದು ಡಿಕೆ ಶಿವಕುಮಾರ್ ಕರೆದ ಸಭೆಗೆ ಅಲ್ಲಿಯ ಕೈ ಶಾಸಕರೇ ಗೈರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ದಯನೀಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದರು.

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಡಿಕೆಶಿ ಅನಿತಾ ಪರವಾಗಿ ಪ್ರಚಾರಕ್ಕೆ ಬಂದರೆ ನಾವು ನೇಣು ಹಾಕಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೆಲವರು ಪ್ರಚಾರಕ್ಕೆ ನಮ್ಮ ಹೆಣ ಕೂಡ ಹೋಗುವುದಿಲ್ಲ ಅಂತ ಬಹಿರಂಗ ಹೇಳಿಕೆ ಮೂಲಕ ಜೆಡಿಎಸ್ ಅಭ್ಯರ್ಥಿಯ ಸ್ಪರ್ಧೆಗೆ ವಿರೋಧಿಸಿದ್ದಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *