ರಾಜ್ಯದಾದ್ಯಂತ 3 ಕೋಟಿ ಸಸಿ ನೆಡಲಾಗುವುದು: ಈಶ್ವರ್‌ ಖಂಡ್ರೆ

– ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತ ರತ್ನ ನೀಡುವಂತೆ ಎಂಎಲ್‌ಸಿ ತಿಮ್ಮಣ್ಣಪ್ಪ ಕಮಕನೂರ ಆಗ್ರಹ

ಕಲಬುರಗಿ: ಮನೆಗೊಂದು ಮರ, ಊರಿಗೊಂದು ವನ ಎಂಬಂತೆ ರಾಜ್ಯದಲ್ಲಿ ಅರಣ್ಯ ಪ್ರದೇಶ ವಿಸ್ತರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಈ ವರ್ಷ ವಿವಿಧ ಕಾರ್ಯಕ್ರಮಗಳಡಿ ರಾಜ್ಯದಾದ್ಯಂತ 3 ಕೋಟಿ ಸಸಿ ನೆಡಲಾಗುತ್ತಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿದ್ದಾರೆ.

ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಇವುಗಳ ಸಹಯೋಗದೊಂದಿಗೆ ಶನಿವಾರ ಪಿ.ಡಿಎ ಕಾಲೇಜು ಹಿಂಭಾಗದ ಹೆಚ್.ಕೆ.ಇ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆಯೋಜಿಸಿದ ʻವನಮಹೋತ್ಸವ-2025ʼ, ಹಸಿರು ಪಥ ಮತ್ತು ಕಲಬುರಗಿಯ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ನೀಟ್ ರೋಲ್ ನಂಬರ್ ದಾಖಲಿಸಲು ಜುಲೈ 8ರವರೆಗೆ ಅವಕಾಶ: ಕೆಇಎ

ರಾಜ್ಯದಲ್ಲಿ ಅರಣ್ಯ ಪ್ರದೇಶ ಇರುವುದು 21% ಇನ್ನು ಕಲ್ಯಾಣ ಕರ್ನಾಟಕದ ಭಾಗದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಇದರ ಪ್ರಮಾಣ 5%ಗಿಂತ ಕಡಿಮೆಯಿದೆ. ವನ ಮಹೋತ್ಸವದ ಕಾರ್ಯಕ್ರಮದಡಿ ಈ ಭಾಗದಲ್ಲಿ ಹೆಚ್ಚು ಹಸಿರು ಹೊದಿಕೆ ಮಾಡುವ ಗುರಿಯೊಂದಿಗೆ 7 ಲಕ್ಷ ಸೇರಿದಂತೆ ರಾಜ್ಯದಾದ್ಯಂತ 28 ಲಕ್ಷ ಸಸಿ ನೆಡಲಾಗುತ್ತಿದೆ. ಇವುಗಳೆಲ್ಲವು ಎತ್ತರದ ಸಸಿಗಳಾಗಿರಲಿವೆ. ಮರ ನೆಡುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಹಾಗಾಗಿ, ನೀವೆಲ್ಲ ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರ ರಕ್ಷಣೆ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಎರಡು ವರ್ಷದಲ್ಲಿ ಕನಿಷ್ಠ 1 ಕೋಟಿ ಸಸಿ ನೆಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: 101.4 ಕೋಟಿ ಸಾಲ ಪಡೆದು ವಂಚನೆ ಕೇಸ್‌ – ಅಲ್ಲು ಅರ್ಜುನ್‌ ತಂದೆಗೆ 3 ಗಂಟೆ ಇಡಿ ಡ್ರಿಲ್‌

ಪ್ರಕೃತಿ ವಿಕೋಪದಿಂದ ಬೆಟ್ಟಗಳು ಕುಸಿಯತ್ತಿವೆ ಹಾಗೂ ಜಾಗತಿಕ ತಾಪಮಾನ ಏರುವಿಕೆಯಿಂದ ಅಪಾಯ ಎದುರಾಗುತ್ತಿದೆ. ಮಳೆ ಸರಿಯಾದ ಸಮಯದಲ್ಲಿ ಬಾರದ ಕಾರಣ ಬೆಳೆಗಳು ನಾಶವಾಗುತ್ತಿವೆ. ನಗರೀಕರಣ ಹಾಗೂ ಅಭಿವೃದ್ದಿ ಹೆಸರಿನಲ್ಲಿ ಜನರು ಮರಗಳನ್ನು ಕಡಿಯುತ್ತಿದ್ದಾರೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡರು. ಕಾರ್ಬನ್ ಡೈ ಆಕ್ಸೈಡ್‌ ಪಡೆದು ಶುದ್ಧ ಗಾಳಿ ನೀಡುವ ಗಿಡ-ಮರಗಳನ್ನು ಪ್ರತಿಯೊಬ್ಬರು ಬೆಳೆಸಿ ಪೋಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈಗಾಗಲೇ ನೆಟ್ಟಿರುವ ಸಸಿಗಳು ಅಸ್ಥಿತ್ವದಲ್ಲಿಲ್ಲ ಎನ್ನುವ ಮಾತುಗಳಿವೆ. ಹಾಗಾಗಿ, ಮೂರನೆಯ ವ್ಯಕ್ತಿಯಿಂದ ಇದನ್ನು ತನಿಖೆ ನಡೆಸಲಾಗುತ್ತದೆ. ಜಿಯೋ ಟ್ಯಾಗ್ ಮೂಲಕ ಗಿಡದ ಪ್ರಗತಿ ವೀಕ್ಷಿಸಲಾಗುವುದು. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ್ದು, ಸಾರ್ವಜನಿಕರು ಮಾರುಕಟ್ಟೆಗೆ ಹೋಗಬೇಕಾದರೆ ಕೈಚೀಲ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ರಾಜ್ಯದಾದ್ಯಂತ 6,500 ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ವನ್ಯ ಜೀವಿ ಸಂರಕ್ಷಣೆ, ಉದ್ಯಾನವನ, ಮೃಗಾಲಯ ಹಾಗೂ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ಲಸಿಕೆಯಿಂದ ಹೃದಯಾಘಾತ ಸಂಭವಿಸಿಲ್ಲ – ಸರ್ಕಾರಕ್ಕೆ ಸಲ್ಲಿಸಲು ತಜ್ಞರ ವರದಿ ಸಿದ್ಧ

ಚಿಂಚೋಳಿಯಲ್ಲಿ ಎಕೋ ಟೂರಿಸ್ಮ್ ಅಭಿವೃದ್ಧಿ
ಬಿಸಿಲಿನ ತಾಪಮಾನ ಹೆಚ್ಚಿರುವ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯ ಪ್ರದೇಶ ಹೆಚ್ಚಿಸಲು ʻಕಲಬುರಗಿ ಹಸಿರು ಹೆಜ್ಜೆʼ ಕಾರ್ಯಕ್ರಮವು ಪೂರಕವಾಗಿದೆ. ಮುಂದಿನ ದಿನದಲ್ಲಿ ವನ್ಯಜೀವಿ ಧಾಮ ಹೊಂದಿರುವ ಚಿಂಚೋಳಿಯ ಚಂದ್ರಂಪಳ್ಳಿ ವ್ಯಾಪ್ತಿಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್-ಬಿಜೆಪಿ ಮಧ್ಯೆ ‌ʻRSS ಬ್ಯಾನ್ʼ ವಾರ್ – ಸಂಘ ಪರಿವಾರ ಮುಟ್ಟಿದ್ರೆ ಭಸ್ಮ ಆಗ್ತೀರಾ; ಕೇಸರಿ ಕಲಿಗಳ ಎಚ್ಚರಿಕೆ

ಖರ್ಗೆ ಅವರಿಗೆ ಭಾರತ ರತ್ನ ನೀಡಿ
ವಿಧಾನ ಪರಿಷತ್ ಶಾಸಕ ತಿಮ್ಮಣ್ಣಪ್ಪ ಕಮಕನೂರ ಮಾತನಾಡಿ, ದೀನ-ದಲಿತರ ಬಗ್ಗೆ ಮತ್ತು ವಿಶೇಷವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಪಾರ ಕಾಳಜಿ ಹೊಂದಿರುವ ಡಾ.ಮಲ್ಲಿಕಾರ್ಜುನ್‌ ಖರ್ಗೆ ಅವರು, ಆರ್ಟಿಕಲ್ 371(ಜೆ) ಜಾರಿಗೆ ತಂದು ಈ ಭಾಗದ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಮುತ್ಸದಿ ನಾಯಕನಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಗೌರವ ʻಭಾರತ ರತ್ನʼ ನೀಡಿ ಗೌರವಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.